ಜಿಲ್ಲೆ

ಅಕ್ರಮವಾಗಿ ಸೇಂದಿ ತಯಾರಿಸುತ್ತಿದ್ದವರ ಬಂಧನ

ಚಾಮರಾಜನಗರ: ರಾಸಾಯನಿಕ ಬಳಸಿ ಸೇಂದಿ ತಯಾರಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅಬಕಾರಿ ಪೊಲೀಸರು ಬಂಧಿಸಿ 335 ಲೀಟರ್ ಸೇಂದಿ ಹಾಗೂ ಪರಿಕರಗಳನ್ನು ಜಪ್ತಿ ಮಾಡಿದ್ದಾರೆ.

ತಾಲೂಕಿನ ನವಿಲೂರು ಗ್ರಾಮದ ಎಸ್.ಸಿದ್ದಮಲ್ಲಿಕಾರ್ಜುನ ಸ್ವಾಮಿ (71), ತಮಿಳುನಾಡು ಮೂಲದ ಪಳಿಯೂರು ಗ್ರಾಮದ ನಿವಾಸಿ ಪೆರಿಯಸ್ವಾಮಿ (55) ಬಂಧಿತ ಆರೋಪಿಗಳು. ಸೋಮಣ್ಣ ಅವರ ಜಮೀನಿನಲ್ಲಿ ಪೆರಿಯಸ್ವಾಮಿ ಅಕ್ರಮವಾಗಿ ಸೇಂದಿ ಇಳಿಸಿ, ರಾಸಾಯನಿಕ ಬಳಕೆ ಮಾಡಿ, ಸೇಂದಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಸುಮಾರು 17 ಸಾವಿರ ರೂ. ಮೌಲ್ಯದ 335 ಲೀಟರ್ ಸೇಂದಿ ಹಾಗೂ ಸೇಂದಿ ತಯಾರಿಕೆಗೆ ಬಳಕೆ ಮಾಡುತ್ತಿದ್ದ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅಬಕಾರಿ ಉಪ ಅಧೀಕ್ಷಕ ವಿಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಚಾ.ನಗರ ವಲಯ ಅಬಕಾರಿ ಇನ್‌ಸ್ಪೆಕ್ಟರ್ ಮಹದೇವ್, ಅಬಕಾರಿ ಇನ್‌ಸ್ಪೆಕ್ಟರ್‌ಗಳಾದ ಉಮಾಶಂಕರ್, ಸುರೇಶ್, ಸಬ್ ಇನ್‌ಸ್ಪೆಕ್ಟರ್ ನಂದಿನಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.