ಚನ್ನರಾಯಪಟ್ಟಣ; ತಾಲೂಕಿನ ಹಿರೀಸಾವೆ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತಿದ್ದ 83 ರಾಸುಗಳನ್ನು ರಕ್ಷಿಸಿರುವ ಹಿರೀಸಾವೆ ಪೊಲೀಸರು 3 ಕಂಟೈನರ್‌ಗಳನ್ನು ವಶಪಡಿಸಿಕೊಂಡಿದ್ದು ಮೂವರನ್ನು ಬಂಧಸಿದ್ದಾರೆ.
ಬೆಂಗಳೂರು ನಿವಾಸಿಗಳಾದ ಮಜೀರ್ ಹುಸ್ಸೇನ್, ಜಮ್ಶೀದ್ ಹಾಗೂ ಮೀರ್ ಸಾದಿಕ್ ಅಲಿ ಬಂಧಿತ ಆರೋಪಿಗಳು.
ಘಟನೆಯ ವಿವರ: ವಿವಿಧ ಸಂತೆಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ಖರೀದಿಸಿರುವ ಎಮ್ಮೆ, ಮಿಶ್ರತಳಿ ಹಸು ಹಾಗೂ ಕರುಗಳು ಸೇರಿದಂತೆ ಸುಮಾರು 83 ಜಾನುವಾರುಗಳನ್ನು ಮೂರು ಕಂಟೈನರ್ ವಾಹನಗಳಲ್ಲಿ ತುಂಬಿಕೊಂಡು ಶನಿವಾರ ಬೆಂಗಳೂರು ಕಡೆಗೆ ಸಾಗಿಸಲಾಗುತ್ತಿತ್ತು.
ಖಚಿತ ಮಾಹಿತಿ ಮೇರೆಗೆ ಹಿರೀಸಾವೆ ಪೊಲೀಸರು ಕಾರ್ಯಾಚರಣೆ ನಡೆಸಿ 3 ಕಂಟೈನರ್‌ಗಳನ್ನು ತಡೆದು ಪರಿಶೀಲಿಸಿದ್ದು ಬಹುತೇಕ ಜಾನುವಾರುಗಳ ಕಾಲು ಹಾಗು ಕತ್ತಿಗೆ ಹಗ್ಗ ಕಟ್ಟಿ ಮನಬಂದಂತೆ ತುಂಬಿರುವ ಅಮಾನವೀಯ ದೃಶ್ಯ ಕಂಡುಬಂದಿತು.
ಕಂಟೈನರ್‌ಗಳು ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿರುವ ಹಿರೀಸಾವೆ ಪೊಲೀಸರು ರಾಸುಗಳನ್ನು ಸಂರಕ್ಷಿಸಿದ್ದಾರೆ. ವಾಹನದಲ್ಲಿ ತುಂಬಿಕೊಂಡಿದ್ದ ಜಾನುವಾರುಗಳನ್ನು ಕೆಳಗಿಳಿಸಿ ತಕ್ಷಣ ಪಶು ವೈದಯರಿಂದ ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಿಸಲಾಯಿತು.
ಬಳಿಕ ಬೇರೆ ವಾಹನಗಳ ವ್ಯವಸ್ಥೆ ಮಾಡಿ ಅರಸೀಕೆರೆ ತಾಲೂಕು ಚಿಕ್ಕ ಬಾಣಾವರದ ಶ್ರೀ ಭಗವಾನ್ ಮಹಾವೀರ್ ಗೋಶಾಲೆ, ಬೋರನಕೊಪ್ಪಲು ಸರ್ಕಾರಿ ಪುಣ್ಯಕೋಟಿ ಗೋಶಾಲೆ ಹಾಗೂ ಕಸ್ತೂರಿ ಬಾ ಗೋಶಾಲೆಗಳಿಗೆ ಸಾಗಿಸಿ ಅಗತ್ಯ ಮೇವು ಮತ್ತು ನೀರು ಕಲ್ಪಿಸಿ ಅವುಗಳ ಆರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದರು.
ತಾಲೂಕಿನ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.