ಜಿಲ್ಲೆ

ಅಕ್ರಮವಾಗಿ ನೆಲೆಸಿದ್ದ ಮೂವರು ಬಾಂಗ್ಲಾ ಪ್ರಜೆಗಳ ಬಂಧನ

ಹಾಸನ: ನಗರದಲ್ಲಿ ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ಮೂವರು ಬಾಂಗ್ಲಾ ಪ್ರಜೆಗಳನ್ನು ಪತ್ತೆ ಮಾಡುವಲ್ಲಿ ಡಿಸಿಆರ್‌ಬಿ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಮಲ್ ಹೊಕ್ಯು ಬಂಧಿತ ಬಾಂಗ್ಲಾದೇಶದ ಪ್ರಜೆಗಳು.
ನಗರದ 80 ಅಡಿ ರಸ್ತೆಯ ಗದ್ದೆಹಳ್ಳದ ನಾಲ್ಕನೇ ಅಡ್ಡ ರಸ್ತೆಯಲ್ಲಿರುವ ಜುಬೇರ್ ಎಂಬುವವರ ಮನೆ ಕಟ್ಟಡ ಕಾಮಗಾರಿ ಕೆಲಸದಲ್ಲಿ ನಿರತರಾಗಿದ್ದರು. ಅದೇ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಒಬ್ಬ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರೆ, ಉಳಿದ ಇಬ್ಬರು ಗಾರೆ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಲೋಕೇಷನ್ ಆಧರಿಸಿ ಪರಿಶೀಲನೆ ಕೈಗೆತ್ತಿಕೊಂಡಾಗ 80 ಅಡಿ ರಸ್ತೆಯಲ್ಲಿರುವುದು ಪತ್ತೆಯಾಗಿದೆ. ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ ನಂತರ ಎಫ್‌ಐಆರ್ ದಾಖಲಿಸಿದ್ದಾರೆ.
ಮೂವರು ಬಾಂಗ್ಲಾ ಪ್ರಜೆಗಳಾಗಿದ್ದು ಪಶ್ಚಿಮ ಬಂಗಾಳದ ವಿಳಾಸ ಹೊಂದಿರುವ ಆಧಾರ್ ಕಾರ್ಡ್ ಹೊಂದಿದ್ದಾರೆ. ಆದರೆ ಅದು ನಕಲಿ ಎಂಬುದು ದೃಢಪಟ್ಟಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೂವರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಬಳಿಕ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಮಗ್ರ ತನಿಖೆಗೆ ಆಗ್ರಹ:
ಜಿಲ್ಲೆಯಲ್ಲಿ ಅಕ್ರಮ ವಲಸಿಗರ ಸಂಖ್ಯೆ ಮಿತಿ ಮೀರಿದ್ದು ಕಾಫಿ ತೋಟ, ಹೋಟೆಲ್, ಕೈಗಾರಿಕೆಗಳಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ನುಸುಳಿರುವವರ ಸಂಖ್ಯೆ ಹೆಚ್ಚಿದೆ. ಅಂತಹವರನ್ನು ಪತ್ತೆ ಮಾಡಿ ಕೂಡಲೇ ಗಡಿಪಾರು ಮಾಡಬೇಕೆಂದು ಬಿಜೆಪಿ ಮುಖಂಡ ಎಸ್.ಕೆ.ವೇಣುಗೋಪಾಲ್ ಆಗ್ರಹಿಸಿದ್ದಾರೆ.