ಜಿಲ್ಲೆ

ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ತೆರವು, ಜೆಸಿಬಿ ಬಳಸಿ ಶೆಡ್‌ಗಳ ಧ್ವಂಸ ನಾವು ಭಾರತೀಯರು ಎಂದು ಅಲವತ್ತುಕೊಂಡ ಸಂತ್ರಸ್ತರು

ಆನೇಕಲ್: ತಾಲೂಕಿನ ಹುಲಿಮಂಗಲ ಮತ್ತು ಜಿಗಣಿ ಕೆರೆ ಸುತ್ತಮುತ್ತ ನೆಲೆಸಿದ್ದ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಜಿಗಣಿ ಪೊಲೀಸರು ಮಂಗಳವಾರ ತೆರವುಗೊಳಿಸಿದರು. ಜೆಸಿಬಿ ಬಳಸಿ ಶೆಡ್ ಕೆಡವಿದರು.

ಆದರೆ, ನಾವು ಬಾಂಗ್ಲಾದೇಶಿಗರಲ್ಲ. ಭಾರತೀಯರು. ಅಸ್ಸಾಂ ಮೂಲದವರು ಎಂದು ಸಂತ್ರಸ್ತರು ಅಲವತ್ತುಕೊಂಡರು. ಆದರೂ ಇದಕ್ಕೆ ಕಿವಿಗೊಡದ ಅಧಿಕಾರಿಗಳು, ಅವರೆಲ್ಲರ ಶೆಡ್‌ಗಳನ್ನು ಧ್ವಂಸಗೊಳಿಸಿ, ಬೇರೆಡೆ ಹೋಗುವಂತೆ ಹೇಳಿದರು.

ಜಿಗಣಿ ಕೆರೆಯ ದಡದಲ್ಲಿ 350ಕ್ಕೂ ಹೆಚ್ಚು ಬಾಂಗ್ಲಾದೇಶದ ಅಕ್ರಮ ವಲಸಿಗರು ಬಂದು ನೆಲೆಸಿದ್ದರು. ತಾತ್ಕಾಲಿಕ ಶೆಡ್ ಕಟ್ಟಿಕೊಂಡು, ಚಿಂದಿ ಆಯುವ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ರಾಸಾಯನಿಕಯುಕ್ತ ಚಿಂದಿಯನ್ನು ಕೆರೆಯಲ್ಲಿ ತೊಳೆಯುವ ಮೂಲಕ ಕೆರೆ ನೀರನ್ನು ವಿಷಯಮಯಗೊಳಿಸುತ್ತಿದ್ದರು. ಈ ಬಗ್ಗೆ ಆ.8ರಂದು ಬಾಂಗ್ಲಾ ಅಕ್ರಮ ವಲಸಿಗರ ಹಾವಳಿ ಶೀರ್ಷಿಕೆಯಲ್ಲಿ ವಿಜಯವಾಣಿ ವಿಸ್ತೃತ ವರದಿ ಪ್ರಕಟಿಸಿತ್ತು.

ಮುಚ್ಚಳಿಕೆ ಬರೆಯಿಸಿಕೊಂಡಿದ್ದ ಪೊಲೀಸರು: ವಿಜಯವಾಣಿಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಜಿಗಣಿ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಕೆ. ಶೇಖರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಬಾಂಗ್ಲಾದೇಶ ನಿರಾಶ್ರಿತರಿಗೆ ಜಮೀನು ಕೊಟ್ಟಿರುವ ಭೂಮಾಲೀಕರನ್ನು ಠಾಣೆಗೆ ಕರೆಯಿಸಿ ಅವರೆಲ್ಲರನ್ನು ಖಾಲಿ ಮಾಡಿಸುವಂತೆ ಎಚ್ಚರಿಕೆ ನೀಡಿದ್ದರು. ಜತೆಗೆ ಈ ಬಗ್ಗೆ ಮುಚ್ಚಳಿಕೆ ಪತ್ರವನ್ನೂ ಬರೆಯಿಸಿಕೊಂಡಿದ್ದರು. ಆದರೂ ಅವರನ್ನು ತೆರವುಗೊಳಿಸದ ಕಾರಣ ಮಂಗಳವಾರ ಪೊಲೀಸರೇ ತೆರವು ಕಾರ್ಯಾಚರಣೆ ನಡೆಸಿದರು.

ಸ್ವಪ್ರೇರಣೆ ದೂರಿನ ಬೆದರಿಕೆ: ಜಿಗಣಿ ಪೊಲೀಸರು, ಬಾಂಗ್ಲಾ ಅಕ್ರಮ ವಲಸಿಗರನ್ನು ತೆರವುಗೊಳಿಸಲು ಮುಂದಾದಾಗ ಭೂಮಾಲೀಕರು ಮತ್ತು ಸಂತ್ರಸ್ತರು ನಾಟಕ ಆಡಲಾರಂಭಿಸಿದ್ದರು. ಇದನ್ನು ಗಮನಿಸಿದ ಪೊಲೀಸರು ಅವರನ್ನು ತೆರವುಗೊಳಿಸದಿದ್ದರೆ, ಸ್ವಪ್ರೇರಣೆ ದೂರು ದಾಖಲಿಸಿಕೊಳ್ಳುವುದಾಗಿ ಬೆದರಿಸಿದ ನಂತರ ಭೂಮಾಲೀಕರು ತೆಪ್ಪಗಾದರು ಎನ್ನಲಾಗಿದೆ.

ಭೂಮಾಲೀಕರ ವಿರುದ್ಧ ಆರೋಪ: ಪೊಲೀಸರಿಗೆ ಕೊಡಬೇಕು ಎಂದು ಹೇಳಿ ಭೂಮಾಲೀಕರು ನಮ್ಮ ಬಳಿ 75 ಸಾವಿರ ರೂ. ಪಡೆದುಕೊಂಡಿದ್ದಾರೆ. ಆದರೂ ಈಗ ನಮ್ಮನ್ನು ತೆರವುಗೊಳಿಸಲಾಗುತ್ತಿದೆ ಎಂದು ಸೂರು ಕಳೆದುಕೊಂಡ ಸಂತ್ರಸ್ತರು ಆರೋಪಿಸಿದರು.

ಪ್ರಭಾವಿಗಳಿಂದ ಶಿಾರಸಿಗೆ ಯತ್ನ: ಜಮೀನಿನಲ್ಲಿದ್ದ ಬಾಂಗ್ಲಾ ಅಕ್ರಮ ವಲಸಿಗರನ್ನು ತೆರವುಗೊಳಿಸದಂತೆ ತಡೆಯಲು ಪೊಲೀಸರ ಮೇಲೆ ಪ್ರಭಾವಿಗಳ ಮೂಲಕ ಶಿಾರಸು ಮಾಡಿಸಲು ಭೂಮಾಲೀಕರು ಯತ್ನಿಸಿದರು. ಕೆಲವು ಜನಪ್ರತಿನಿಧಿಗಳನ್ನು ಠಾಣೆಗೆ ಕರೆದೊಯ್ದು ಪೊಲೀಸರ ಮೇಲೆ ಒತ್ತಡ ಹೇರಲು ಯತ್ನಿಸಿದರು. ಆದರೆ, ಪೊಲೀಸರು ಇದ್ಯಾವುದಕ್ಕೂ ಜಗ್ಗಲಿಲ್ಲ.

ಶೆಡ್‌ಗಳಲ್ಲಿ ಇದ್ದವರು ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ವಿಜಯವಾಣಿಯಲ್ಲಿ ವರದಿ ಮಾಡಲಾಗಿತ್ತು. ಬಳಿಕ ನಾವು ಸ್ಥಳಕ್ಕೆ ತೆರಳಿ ಪರಿಶೀಲಿಸಿದೆವು. ಅವರ ಬಗ್ಗೆ ಅನುಮಾನ ಮೂಡಿದ್ದರಿಂದ ಅವರೆಲ್ಲರನ್ನೂ ತೆರವುಗೊಳಿಸಲು ಸಿಬ್ಬಂದಿಗೆ ಸೂಚಿಸಿದ್ದೇನೆ. ಬಿ.ಕೆ. ಶೇಖರ್ ಜಿಗಣಿ ಠಾಣೆ ಸಿಪಿಐ