ಚಾಮರಾಜನಗರ : ಮೈಸೂರಿನ ಕಡೆಯಿಂದ ಚಾಮರಾಜನಗರಕ್ಕೆ ಕಂಟೇನರ್‌ನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನು ಪಟ್ಟಣ ಠಾಣೆ ಪೊಲೀಸರು ಗುರುವಾರ ಮಧ್ಯರಾತ್ರಿ ಬಂಧಿಸಿದ್ದಾರೆ.
ಮೈಸೂರಿನ ಉದಯಗಿರಿಯ ಆತೀಪ್(27) ಬಂಧಿತ ಆರೋಪಿ. ಈತನ ಕಂಟೇನರ್ ವಶಪಡಿಸಿಕೊಂಡು 15 ಎಮ್ಮೆ, 3 ಹಸುಗಳನ್ನು ರಕ್ಷಣೆ ಮಾಡಲಾಗಿದೆ. ಮೈಸೂರು-ಚಾ.ನಗರ ಮುಖ್ಯರಸ್ತೆಯಲ್ಲಿ ಬರುತ್ತಿರುವ ಕಂಟೇನರ್‌ನಲ್ಲಿ ಅಕ್ರಮವಾಗಿ ಗೋವುಗಳ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆಗೆ ಇಳಿದರು.
ಮುಖ್ಯರಸ್ತೆಯಲ್ಲಿರುವ ಮರಿಯಾಲ ಗ್ರಾಮದ ಗೇಟ್ ಬಳಿ ಕಂಡ ಕಂಟೇನರ್ ಅನ್ನು ಪೊಲೀಸರು ಹಿಂಬಾಲಿಸಿ ಚಾಲಕ ಅತೀಫ್‌ಗೆ ಗಾಡಿ ನಿಲ್ಲಿಸುವುದಕ್ಕೆ ಹೇಳಿದ್ದಾರೆ. ಆದರೆ ಅತೀಫ್ ಗಾಡಿ ನಿಲ್ಲಿಸಿಲ್ಲ. ಪೊಲೀಸರು ಸುಮಾರು 6 ಕಿಮೀ ಚೇಸಿಂಗ್ ಮಾಡಿ ಕಂಟೇನರ್ ತಡೆದು ನಿಲ್ಲಿಸಿದ್ದಾರೆ. ಬಳಿಕ ಪರಿಶೀಲಿಸಿದಾಗ ಒಳಗೆ ಗೋವುಗಳು ಪತ್ತೆಯಾಗಿವೆ. ಕಂಟೇನರ್ ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿ, ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.