ಜಿಲ್ಲೆ

ಅಕ್ರಮವಾಗಿ 660 ಚೀಲ ಪಡಿತರ ಅಕ್ಕಿ ಸಂಗ್ರಹ ಬಯಲು

ಹಾಸನ: ಸಕಲೇಶಪುರ ತಾಲೂಕಿನ ಬಾಳುಪೇಟೆಯ ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯ ತೀರ್ಥಕುಮಾರ್ ಅವರ ಗೋದಾಮಿನಲ್ಲಿ ಅಕ್ರಮವಾಗಿ 660 ಚೀಲ ಪಡಿತರ ಅಕ್ಕಿಯನ್ನು ಸಂಗ್ರಹ ಮಾಡಿದ್ದು ಬಯಲಾಗಿದೆ.

ಆಹಾರ ಶಿರಸ್ತೇದಾರ್ ದಾಕ್ಷಾಯಿಣಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ಹಾಸನದ ಕೈಗಾರಿಕಾ ಪ್ರದೇಶದಲ್ಲಿರುವ ಗೋದಾಮಿನಿಂದ 660 ಅಕ್ಕಿ ಚೀಲಗಳನ್ನು ಪ್ರಮೋದ ಕುಮಾರ್ ಅವರ ರಂಗಸ್ವಾಮಿ ಟ್ರಾನ್ಸ್‌ಪೋರ್ಟ್‌ನ ಎರಡು ಲಾರಿಗೆ ಬುಧವಾರ ಲೋಡ್ ಮಾಡಿ, ಅಕ್ಕಿಯನ್ನು ಸಕಲೇಶಪುರದ ಗೋದಾಮಿಗೆ ತೆಗೆದುಕೊಂಡು ಹೋಗಲು ಟ್ರಕ್‌ಶೀಟ್‌ಗಳನ್ನು ನೀಡಲಾಗಿತ್ತು.

ಆದರೆ ಅಕ್ಕಿ ಚೀಲಗಳನ್ನು ಸಕಲೇಶಪುರಕ್ಕೆ ಸಾಗಿಸಬೇಕಿದ್ದ ಲಾರಿಯ ಚಾಲಕರು, ಮೋಸ ಮಾಡುವ ಉದ್ದೇಶದಿಂದ ಮಾರ್ಗ ಮಧ್ಯೆ ಅಂದರೆ ಬಾಳುಪೇಟೆಯ ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದರು.

ಇದು ಬಯಲಾದ ನಂತರ ರಂಗನಾಥ ಟ್ರಾನ್ಸ್‌ಪೋರ್ಟ್‌ನ ಪ್ರಮೋದ್ ಕುಮಾರ್, ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ತೀರ್ಥಕುಮಾರ್ ಹಾಗೂ ಎರಡು ಲಾರಿಗಳ ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದಾಕ್ಷಾಯಿಣಿ ಅವರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.