ನಾಗರಾಜ ಜೋರಾಪೂರ ಚನ್ನಮ್ಮನ ಕಿತ್ತೂರು: ತಾಲೂಕು ಪಂಚಾಯಿತಿಯಿಂದ ಕೇವಲ ಭೂ ಬಾಡಿಗೆಗೆಂದು ಅನುಮತಿ ಪಡೆದು ತಾವೇ 99 ವರ್ಷಗಳೆಂದು ನೋಂದಣಿ ಕಚೇರಿಯಲ್ಲಿ ದಾಖಲಿಸಿಕೊಂಡಿದ್ದಾರೆ ಎಂಬ ಅಕ್ರಮ ಸಾಬೀತಾದರೂ ಈ ಬಗ್ಗೆ ಇನ್ನೂ ಕ್ರಮವಾಗಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.
ಪಟ್ಟಣದ ಹದಯ ಭಾಗದಲ್ಲಿಯ ಸರ್ಕಾರಿ ಆಸ್ತಿಯನ್ನು ಪ್ರಭಾವಿಗಳು ಸಹಕಾರಿ ಸಂಸ್ಥೆಗಳ ಹೆಸರಲ್ಲಿ ಪಡೆದು ದುರುಪಯೋಗ ಮಾಡುತ್ತಿದ್ದಾರೆಂದು ಮಾರ್ಚ್ 4ರಂದು ಬಾಡಿಗೆ ಪಡೆದ ಜಾಗ ದುರ್ಬಳಕೆ ಎಂಬ ಶೀರ್ಷಿಕೆಯಲ್ಲಿ ವಿಜಯವಾಣಿಯಲ್ಲಿ ವರದಿ ಪ್ರಕಟಗೊಂಡಿತ್ತು. ಇದಾದ ನಂತರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆದರೆ, ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸಂಘ-ಸಂಸ್ಥೆಗಳ ನಡೆಸುವ ಉದ್ದೇಶಕ್ಕೆ ನಮಗೆ ಭೂ ಬಾಡಿಗೆ ನೀಡಬೇಕೆಂದು ತಾಲೂಕು ಪಂಚಾಯಿತಿಯಿಂದ ಪ್ರಭಾವಿಗಳು ಅನುಮತಿ ಪಡೆದಿದ್ದಾರೆ. ತಾಲೂಕು ಪಂಚಾಯಿತಿ ಆದೇಶ ಪತ್ರದಲ್ಲಿ ಸಂಘ-ಸಂಸ್ಥೆಗಳ ಉದ್ದೇಶಕ್ಕಾಗಿ ಹಾಗೂ ಭೂ ಬಾಡಿಗೆ ನೀಡಬೇಕೆಂದು ಆದೇಶ ಪತ್ರದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಅಂದಿನ ಗ್ರಾಮ ಪಂಚಾಯಿತಿ ಸಭೆಯಲ್ಲಿ 1726/ಅ ಸಂಖ್ಯೆಯ 65+50 ಅಳತೆಯ ಸರ್ಕಾರಿ ಜಾಗವನ್ನು ಭೂ ಬಾಡಿಗೆ ಎಂದು ಸಭೆಯಲ್ಲಿ ಠರಾವು ಪತ್ರದಲ್ಲೂ ಸ್ಪಷ್ಟವಾಗಿ ಬರೆಯಲಾಗಿದೆ. ಆದರೆ, ಇದನ್ನೇ ಅಕ್ರಮವಾಗಿ 99 ವರ್ಷ ಎಂದು ತಿದ್ದುಪಡಿ ಮಾಡಿ ವಾರ್ಷಿಕ ಬರೀ 1200 ರೂ. ಬಾಡಿಗೆ ಪಾವತಿ ಮಾಡುತ್ತಿದ್ದಾರೆ.
ಸರ್ಕಾರಿ ಆಸ್ತಿಗಿಲ್ಲ ಬೇಲಿ: ಸರ್ಕಾರಿ ಆಸ್ತಿ ಭೂ ಬಾಡಿಗೆಗೆ ನೀಡಿದರೆ ಅದು ಕೇವಲ ತಾತ್ಕಾಲಿಕವಾಗಿರುತ್ತದೆ. ಸರ್ಕಾರಿ ಕೆಲಸಗಳಿಗೆ ಅವಶ್ಯಕತೆ ಬಿದ್ದರೆ ಅವುಗಳನ್ನು ಮರಳಿ ಪಡೆಯುವ ಹಕ್ಕು ಕೂಡ ಇದೆ. ಕಿತ್ತೂರು ತಾಲೂಕಾದ ನಂತರ ಪಟ್ಟಣ ಸಾಕಷ್ಟು ಬೆಳೆಯುತ್ತಿದೆ. ಆದರೆ ಸರ್ಕಾರಿ ಆಸ್ತಿಗೆ ರಕ್ಷಣೆ ಇಲ್ಲದೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಆಸ್ತಿಗಳು ಪ್ರಭಾವಿಗಳ ಪಾಲಾಗಿವೆ. ನಕಲಿ ಸಂಸ್ಥೆ-ಸಂಘಗಳ ಹೆಸರಲ್ಲಿ ಸರ್ಕಾರಿ ಜಾಗ ಭೂ ಬಾಡಿಗೆಗೆ ಪಡೆದು ವ್ಯಾಪಾರ ಮಳಿಗೆಗಳಾಗಿ ಮಾಡಿ ಸರ್ಕಾರಕ್ಕೆ ಪುಡಿಗಾಸು ನೀಡಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಪಡೆಯುವ ಮೂಲಕ ವಂಚಿಸುತ್ತಿದ್ದಾರೆ.
ಸರ್ಕಾರದ ಆಸ್ತಿಯನ್ನು ನೋಂದಣಿ ಮಾಡಿಕೊಡಲು ಯಾರಿಗೂ ಆಸ್ಪದ ಇಲ್ಲ. ಭೂ ಬಾಡಿಗೆಗೆ ನೀಡಿದ ಸರ್ಕಾರಿ ಆಸ್ತಿ ಯಾವಾಗ ಬೇಕಾದರೂ ಮರಳಿ ಪಡೆಯಬಹುದು. ಭೂ ಬಾಡಿಗೆ ನೀಡುವುದು ಕೇವಲ ತಾತ್ಕಾಲಿಕ. ಈ ಸರ್ಕಾರದ ಆಸ್ತಿ ದಾಖಲೆಗಳನ್ನು ಮುಂಬರುವ ಎಸ್‌ಡಿಎಂಸಿ ಸಭೆಯಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತೇನೆ. | ಬಾಬಾಸಾಹೇಬ ಪಾಟೀಲ ಶಾಸಕ ಚನ್ನಮ್ಮನ ಕಿತ್ತೂರು. ತಾಲೂಕು ಪಂಚಾಯಿತಿ ದಾಖಲೆಗಳ ಪ್ರಕಾರ ಆಸ್ತಿ ನಂ.1726/ಅ ಇದರ ಸರ್ಕಾರಿ ಜಾಗವನ್ನು ಸಂಘ-ಸಂಸ್ಥೆಗಳ ಉದ್ದೇಶಕಾಗಿ ಭೂ ಬಾಡಿಗೆಗೆ ಮಾತ್ರ ಅನುಮತಿ ನೀಡಲಾಗಿದೆ. | ಕಿರಣ ೋರ್ಪಡೆ ಇಒ ತಾಪಂ ಚನ್ನಮ್ಮನ ಕಿತ್ತೂರು.