ಚಿತ್ರದುರ್ಗ: ಹೊಸದುರ್ಗ ತಾಲೂಕಿನ ಇಟ್ಟಿಗೆಹಳ್ಳಿಯ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಸಾಗುವಳಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮತ್ತೋಡು ಹೋಬಳಿ, ಇಟ್ಟಿಗೆಹಳ್ಳಿ ಹೊಸ-ಹಳೆ ತಿಮ್ಮಪ್ಪನಹಟ್ಟಿ, ಹರಿಜನ ಕಾಲನಿ, ಬಿ.ಜಿ.ನಗರ, ನಾಗತ್ತಿಹಳ್ಳಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಅಂದಾಜು 431 ಎಕರೆ ವಿಸ್ತೀರ್ಣದ ಸರ್ಕಾರಿ ಗೋಮಾಳ ಇದಾಗಿದ್ದು, ಅಕ್ರಮ ತಡೆಯಲು ಮುಂದಾಗಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಮೇಲ್ಕಂಡ ಗ್ರಾಮಗಳ ರೈತರ ಜಮೀನುಗಳು ವಾಣಿವಿಲಾಸ ಸಾಗರ ಜಲಾಶಯ ತುಂಬಿದ ಬಳಿಕ ಹಿನ್ನೀರಿನ ರಭಸಕ್ಕೆ ಮುಳುಗಡೆ ಆಗಿದೆ. ಹೀಗಾಗಿ ನಿರಾಶ್ರಿತರಿಗೆ ಕಾನೂನಾತ್ಮಕವಾಗಿ ಭೂಮಿ ಮಂಜೂರು ಮಾಡಲು ಆ ವೇಳೆ ಶಾಸಕರಾಗಿದ್ದ ಗೂಳಿಹಟ್ಟಿ ಶೇಖರ್, ಹಾಲಿ ಶಾಸಕ ಬಿ.ಜಿ.ಗೋವಿಂದಪ್ಪ ಭರವಸೆ ನೀಡಿ ಸಹಮತ ವ್ಯಕ್ತಪಡಿಸಿದ್ದಾರೆ. ಇದನ್ನು ಕೆಲವರು ವಿರೋಧಿಸಿ, ಒಕ್ಕಲೆಬ್ಬಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರೈತರು, ನಿರಾಶ್ರಿತರೂ ಅಲ್ಲದ ಅನರ್ಹರಿಗೆ ಯಾವ ಕಾರಣಕ್ಕೂ ಭೂಮಿ ಮಂಜೂರು ಮಾಡಬಾರದು. ತೊಂದರೆಗೆ ಒಳಗಾದ ರೈತರಿಗೆ ಮಾತ್ರ ನ್ಯಾಯ ದೊರಕಿಸಿಕೊಡಬೇಕು. ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿದರು.
ಗ್ರಾಮಸ್ಥರಾದ ಪ್ರಮೋದ, ಪ್ರವೀಣ, ಪಾಲಾಕ್ಷ, ಗಿರೀಶ್, ಚಂದ್ರಪ್ಪ, ತಿಮ್ಮಪ್ಪ, ಪಾಂಡುರಂಗ, ಪ್ರಕಾಶಮೂರ್ತಿ, ರಘು, ಈಶ್ವರಪ್ಪ, ರಾಜಪ್ಪ, ಧನಂಜಯ, ಸಾವಿತ್ರಮ್ಮ, ದೊಡ್ಡ ಕರಿಯಮ್ಮ, ಸಿದ್ಧಪ್ಪ, ಗುರು, ಜಯಣ್ಣ ಇತರರಿದ್ದರು.