ಕಡೂರು ಮಾತಾ ಲೇಔಟ್‌ನಲ್ಲಿ ಒತ್ತುವರಿ ಮಾಡಿಕೊಂಡ ಶೆಡ್‌ಗಳನ್ನು ಪುರಸಭೆಯಿಂದ ತೆರವುಗೊಳಿಸಲಾಯಿತು.  
ಜಿಲ್ಲೆ

ಅಕ್ರಮ ಶೆಡ್ ತೆರವುಗೊಳಿಸಿದ ಪುರಸಭೆ

ಕಡೂರು: ಪುರಸಭೆ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡಿದ್ದ ಶೆಡ್‌ಗಳನ್ನು ಪುರಸಭೆ ಅಧಿಕಾರಿಗಳ ತಂಡ ಮಂಗಳವಾರ ತೆರವುಗೊಳಿಸಿ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿತು.

ಪಟ್ಟಣದ ಬಸವೇಶ್ವರ ಆಸ್ಪತ್ರೆ ಹಿಂಭಾಗದ ಮಾತಾ ಲೇಔಟ್‌ನಲ್ಲಿ ಸುಮಾರು 100*30 ಅಳತೆಯ ಜಾಗವನ್ನು ಒಬ್ಬರು ಅತಿಕ್ರಮಿಸಿಕೊಂಡು ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದರು. ಬಳಿಕ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಜೆಸಿಬಿಯಿಂದ ಶೆಡ್‌ಗಳನ್ನು ನೆಲಸಮಗೊಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿ, ಪುರಸಭೆ ಆಸ್ತಿಯನ್ನು ಅತಿಕ್ರಮಿಸಿಕೊಂಡಿರುವ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪುರಸಭೆ ಜಾಗ ಒತ್ತುವರಿ ಮಾಡಿರುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದರು. ಪುರಸಭೆ ಸಿಬ್ಬಂದಿ ಇದ್ದರು.