ಗುಂಡ್ಲುಪೇಟೆ : ಬಂಡೀಪುರದಲ್ಲಿ ಅಧಿಕಾರಿಗಳ ಸಹಕಾರದಿಂದಲೇ ಅಕ್ರಮವಾಗಿ ರೆಸಾರ್ಟ್ ನಿರ್ಮಾಣವಾಗುತ್ತಿದ್ದು, ಕೂಡಲೇ ಇವುಗಳನ್ನು ತೆರವು ಮಾಡಬೇಕು ಎಂದು ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಒತ್ತಾಯಿಸಿದರು.
ತಾಲೂಕಿನಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದ್ದು ಯಾವುದೇ ಅಧಿಕಾರಿಗಳು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬಂಡೀಪುರದಲ್ಲಿ ಅಧಿಕಾರಿಗಳ ಸಹಕಾರದಿಂದಲೇ ಅಕ್ರಮ ರೆಸಾರ್ಟ್ ನಿರ್ಮಾಣವಾಗುತ್ತಿವೆ. ಅಧಿಕೃತವಾಗಿ ಕೇವಲ 3 ಅನುಮತಿ ಇದ್ದರೆ ಅನಧಿಕೃತವಾಗಿ 30 ಹೋಂ ಸ್ಟೇ ರೆಸಾರ್ಟ್ ಇದ್ದು ಒತ್ತುವರಿಯಿಂದ ಅರಣ್ಯ ನಾಶವಾಗುತ್ತಿದೆ. ಜತೆಗೆ ಜನಸಂದಣಿ ಶಬ್ದ ಹೆಚ್ಚಾದಂತೆ ಕಾಡು ಪ್ರಾಣಿಗಳು ನಾಡಿನತ್ತ ಬಂದಿ ರೈತರ ಜಮೀನು ಜಾನುವಾರು ಹಾಗೂ ರೈತರ ಮೇಲೆ ದಾಳಿ ಮಾಡುತ್ತಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಅನೇಕ ಹಣವಂತರು ರೆಸಾರ್ಟ್ ಸ್ಥಾಪಿಸಲು ಮುಂದಾಗಿದ್ದಾರೆ. ರೈತರಿಗೆ ಸಾಗುವಳಿಗೆ ಅವಕಾಶ ನೀಡದೆ ಐಷಾರಾಮಿ ಜೀವನ ಮಾಡುವವರಿಗೆ ಮಾತ್ರ ರೆಸಾರ್ಟ್ ಕಟ್ಟಲು ಅವಕಾಶ ಮಾಡಿಕೊಡುತ್ತಿದ್ದಾರೆ. ಕೂಡಲೇ ಇವುಗಳನ್ನು ತೆರವುಗೊಳಿಸಬೇಕು. ತಾಲೂಕನ್ನು ಬರ ಪಟ್ಟಿಗೆ ಸೇರಿಸಬೇಕು, ಭ್ರಷ್ಟಾಚಾರ, ಸೇರಿದಂತೆ ವಿವಿಧ ವಿಚಾರಗಳನ್ನು ಒಳಗೊಂಡಂತೆ ಸೆ.21ಕ್ಕೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ರೈತಸಂಘದ ತಾಲೂಕು ಅಧ್ಯಕ್ಷ ಹೊಸೂರು ಮಹೇಶ್, ಬೆಟ್ಟಹಳ್ಳಿ ಗುರು, ಹಾಲಹಳ್ಳಿ ಮಹೇಶ್, ಬೆಟ್ಟದಮಾದಳ್ಳಿ ಷಣ್ಮುಖಸ್ವಾಮಿ, ವೃಷಭೇಂದ್ರ, ಕೋಡಹಳ್ಳಿ ರಘು ಹಾಗೂ ಇತರರು ಇದ್ದರು.