ಜಿಲ್ಲೆ

ಅಕ್ರಮ ಮೈಕ್ರೋ ಫೈನಾನ್ಸ್‌ಗಳನ್ನು ನಿಷೇಧಿಸಿ: ಭೂಮಿ ಕ್ಷೇಮಾಭಿವೃದ್ಧಿ ಸಂಘದ

ಹಾಸನ: ಮೈಕ್ರೋ ಫೈನಾನ್ಸ್‌ಗಳ ಬಡ್ಡಿ ಹಾವಳಿಯಿಂದ ಬೇಸತ್ತು ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಇಂತಹ ಫೈನಾನ್ಸ್‌ಗಳನ್ನು ನಿಷೇಧಿಸಬೇಕು. ಒಂದು ವೇಳೆ ನಿಷೇಧ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನ್ಯಾಯ ಸಿಗುವವರೆಗೂ ಬೀದಿಗಿಳಿದು ಹೋರಾಟ ಮಾಡುವುದಾಗಿ ಭೂಮಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್ ಎಚ್ಚರಿಕೆ ನೀಡಿದರು.
ಮೈಕ್ರೋ ಫೈನಾನ್ಸ್‌ಗಳು ರಾಜ್ಯಾದ್ಯಂತ ಹಾಗೂ ದೇಶಾದ್ಯಂತ ಪ್ರತಿ ಗ್ರಾಮದ ಮಹಿಳೆಯರಿಗೆ ಆಧಾರ್‌ಕಾರ್ಡ್, ಪಾನ್ ಕಾರ್ಡ್ ಆಧಾರದ ಮೇಲೆ ಅಕ್ರಮವಾಗಿ 25 ಸಾವಿರ ರೂ.ನಿಂದ 5 ಲಕ್ಷದ ರೂ.ವರೆಗೆ ಹಲವಾರು ಸಂಘಗಳು ಕೊಡುತ್ತಿವೆ. ಸಾಲದ ವಸೂಲಿಯನ್ನು ವಾರ, ಹದಿನೈದು ದಿನ ಹಾಗೂ ತಿಂಗಳಿಗೆ ವಸೂಲಿ ಮಾಡುತ್ತವೆ. ಓರ್ವ ಮಹಿಳೆಗೆ 10 ರಿಂದ 12 ಮೈಕ್ರೋ ಫೈನಾನ್ಸ್‌ಗಳು ಸಾಲವನ್ನು ಕೊಡುತ್ತಿವೆ. ಸಾಲ ಕೊಡುವ ಮುನ್ನ ಶೇ.8 ಹಾಗೂ ಶೇ.9 ಬಡ್ಡಿ ಎಂದು ಹೇಳುತ್ತಾರೆ. ಆದರೆ ಸರಿಯಾದ ಲೆಕ್ಕ ನೋಡಿದರೆ ಶೇ.20ರಿಂದ ಶೇ.36 ವರೆಗೆ ಬಡ್ಡಿಯಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹಲವಾರು ಮಹಿಳೆಯರು ಮೈಕ್ರೋ ಫೈನಾನ್ಸ್‌ಗಳು ನೀಡಿದ ಸಾಲವನ್ನು ತೀರಿಸಲು ಆಗದೆ ಊರನ್ನು ಬಿಟ್ಟಿದ್ದಾರೆ. ಇನ್ನು ಕೆಲ ಮಹಿಳೆಯರು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಯಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ದೇಶಾದ್ಯಂತ ಇರುವ ಅಕ್ರಮ ಮೈಕ್ರೋ ಫೈನಾನ್ಸ್‌ಗಳನ್ನು ಬ್ಯಾನ್ ಮಾಡಬೇಕು. ಇಲ್ಲದಿದ್ದರೆ ಇಂತಹ ಪೈನಾನ್ಸ್‌ಗಳಿಂದ ಜನ ಸಾಮಾನ್ಯರಿಗೆ ಎದುರಾಗುವ ಅನಾಹುತಗಳಿಗೆ ಸರ್ಕಾರಗಳೇ ನೇರ ಹೊಣೆಯಾಗುತ್ತವೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ರವಿ, ಜಿ.ಎಸ್. ರಾಜಕುಮಾರ್, ನಾಗರತ್ನಾ, ದಿನೇಶ್ ಇತರರು ಉಪಸ್ಥಿತರಿದ್ದರು.