ಜಿಲ್ಲೆ

ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ!?

ಹಾಸನ: ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಅಕ್ರಮ ಗಣಿಗಾರಿಕೆ ಪ್ರದೇಶ ಮತ್ತು ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.


ಬುಧವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಕಾರ್ಯಕ್ಕೆ ಸರ್ಕಾರದಿಂದ 30 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ. ಜಿಲ್ಲೆಯ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 12 ಅಕ್ರಮ ಗಣಿಗಾರಿಕೆ ಪ್ರದೇಶಗಳನ್ನು ಗುರುತಿಸಲಾಗಿದೆ. ಸದರಿ 12 ಸ್ಥಳಗಳಲ್ಲಿ ಮತ್ತು ಜಿಲ್ಲೆಯ ವಿವಿಧ 14 ಪ್ರಮುಖ ಚೆಕ್‌ಪೋಸ್ಟ್‌ಗಳಲ್ಲಿ 52 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.


ಸೋಲಾರ್ ಪ್ಯಾನಲ್‌ನೊಂದಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ರೆಕಾರ್ಡಿಂಗ್ ಮತ್ತು ಮಾನಿಟರಿಂಗ್ ಸೌಲಭ್ಯದ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪೊಲೀಸರ ಗಮನಕ್ಕೆ ಸಿಸಿಟಿವಿ ದೃಶ್ಯಗಳು ತಲುಪುವ ವ್ಯವಸ್ಥೆ ಇದೆ. ಸಕಲೇಶಪುರ ತಾಲೂಕಿನ ಗೋಪಾಲಪುರ, ಹೊಂಕರವಳ್ಳಿ, ಮಾಗಲು, ಚಂಗಡಿಹಳ್ಳಿ, ಹುಲಗತ್ತೂರು ಮತ್ತು ವಣಗೂರು-ಕೂಡುರಸ್ತೆ, ಆಲೂರು ತಾಲೂಕಿನ ಕೆ.ಹೊಸಕೋಟೆ, ರಾಯರಕೊಪ್ಪಲು, ಗದ್ದೆಕೊಪ್ಪಲು, ಹರಿಹಳ್ಳಿ ದೇವಸ್ಥಾನ ಮತ್ತು ಅರೆಬಿಕ್ ಶಾಲೆ, ಬೇಲೂರು ತಾಲೂಕಿನ ಬೇಲೂರು ನಗರ ಮತ್ತು ಚೀಕನಹಳ್ಳಿ ಹಾಗೂ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಲವಡಿಸಲಾಗುವುದು ಎಂದು ವಿವರ ನೀಡಿದರು.


ನಿಯಮದ ಪ್ರಕಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಮರಳು ಸಾಗಣಿಕೆಗೆ ಅವಕಾಶ ಇದೆ. ಆದರೆ ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಕುರಿತು ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸದಾಗಿ ಮರಳು ಗಣಿಗಾರಿಕೆಗೆ ಲೈಸೆನ್ಸ್ ಪಡೆಯುವ ಸಂದರ್ಭದಲ್ಲಿ ಆಯಾ ಡಿಪೋಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ ಎಂದರು.


ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಸಾರ್ವಜನಿಕರು ಸಹ ದೂರು ನೀಡಬಹುದಾಗಿದ್ದು, ರಾತ್ರಿ ವೇಳೆ ಅಥವಾ ಅನಧಿಕೃತವಾಗಿ ಮರಳು ಸಾಗಣೆ ಮಾಡುತ್ತಿರುವ ಕಂಡು ಬಂದಲ್ಲಿ 112 ಸಂಖ್ಯೆಗೆ ಅಥವಾ 9480804787 ಅಥವಾ 08172-268845 ಕರೆ ಮಾಡಿ ತಿಳಿಸಬಹುದಾಗಿದೆ.