ಯಳಂದೂರು: ತಾಲೂಕಿನ ಅಗರ ಗ್ರಾಮದ ಬಳಿ ಹಾದು ಹೋಗಿರುವ ಸುವರ್ಣವತಿ ಹೊಳೆ ಸಮೀಪ ಹಾಗೂ ತಾಲೂಕಿನ ಕೆಲವು ಗ್ರಾಮಗಳ ದಡದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.!
ತಾಲೂಕಿನ ನದಿಯಂಚಿನಲ್ಲಿರುವ ಅಗರ- ಮಾಂಬಳ್ಳಿ ಅಂಬಳೆ, ಯರಿಯೂರು, ಉಪ್ಪಿನಮೋಳೆ, ಗಣಿಗನೂರು, ಚಾಮಲಾಪುರ, ಮದ್ದೂರು, ಬೂದಿತಿಟ್ಟು, ಅಲ್ಕೆರೆ ಅಗ್ರಹಾರ, ಕಂದಹಳ್ಳಿ ಹಾಗೂ ಯಳಂದೂರು ಪಟ್ಟಣದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ನದಿಯಲ್ಲಿ ಅಪಾರ ಪ್ರಮಾಣದ ಮರಳು ಶೇಖರಣೆಯಾಗಿದ್ದು, ಇದರಿಂದ ಮರಳು ಗಣಿಗಾರಿಕೆಗೆ ಎಗ್ಗಿಲ್ಲದೆ ನಡೆಯುತ್ತಿದೆ. ಅಲ್ಲದೆ ಮಳೆಯಾದಾಗ ಭಾರಿ ಪ್ರಮಾಣದಲ್ಲಿ ನೀರು ಹರಿಯುವುದರಿಂದ ಹೊಳೆಯಲ್ಲಿ ಮಣ್ಣಿನ ಸವೆತ ಉಂಟಾಗಿ ಹೆಚ್ಚಿನ ಪ್ರಮಾಣದಲ್ಲಿ ಮರಳು ಸಂಗ್ರಹವಾಗಿದೆ.
ತಾಲೂಕಿನ ಅಗರ ಗ್ರಾಮದ ಮಹದೇವಪ್ಪನ ಕಟ್ಟೆ, ಸುವರ್ಣಾವತಿ ನದಿಯ ಬದಿಯಲ್ಲಿ ರಾತ್ರಿ ಹಾಗೂ ಮುಂಜಾನೆ ಟಾರ್ಚ್‌ಲೈಟ್ ಮತ್ತು ಬೆಳದಿಂಗಳ ಸಹಾಯದಿಂದ ಮರಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಲಾಗುತ್ತದೆ. ನಂತರ ಬೈಕ್ ಮೂಲಕ ಸಾಗಿಸಲಾಗುತ್ತದೆ. ದಂಧೆಕೋರರು ನಿತ್ಯ ರಾಜಾರೋಷವಾಗಿ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ. ಈ ಅಕ್ರಮ ಮರಳು ದಂಧೆಯನ್ನು ತಡೆಯುವ ಕೆಲಸವನ್ನು ಕಂದಾಯ, ಪೊಲೀಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಡಬೇಕಿತ್ತಾದರೂ ಸಂಬಂಧವೇ ಇಲ್ಲದಂತೆ ಮೌನವಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂಬುದು ಸ್ಥಳೀಯರಾದ ಮಹೇಶ್, ಕುಮಾರ್ ಆರೋಪ.
ತಾಲೂಕಿನ ಅಗರ ಸೇರಿದಂತೆ ಕೆಲವು ನದಿ ಬದಿಯಲ್ಲಿ ಕೂಲಿ ಕಾರ್ಮಿಕರು ಜೀವದ ಹಂಗು ತೊರೆದು ಹೊಳೆಯಲ್ಲಿ ನೀರಿನಲ್ಲಿ ಮುಳುಗಿ ಮರಳನ್ನು ಸಂಗ್ರಹಿಸುತ್ತಾರೆ. ನಂತರ ತೆಪ್ಪದ ಮೂಲಕ ದಡಕ್ಕೆ ಸಾಗಿಸಿ ನಂತರ ಚೀಲಗಳಲ್ಲಿ ಸಾಗಿಸುತ್ತಾರೆ.
ಅಗರ ಸಮೀಪ ಸುವರ್ಣವತಿ ಹೊಳೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಸಂಬಂಧಪಟ್ಟ ರಾಜಸ್ವ ನಿರೀಕ್ಷಕ, ಗ್ರಾಮಲೆಕ್ಕಿಗರಿಗೆ ಸೂಚನೆ ನೀಡಲಾಗುವುದು. ಮರಳು ಗಣಿಗಾರಿಕೆ ಮಾಡುವ ಸ್ಥಳಗಳನ್ನು ಪರಿಶೀಲಿಸಿ ಕಾನೂನು ಕ್ರಮ ವಹಿಸಲಾಗುವುದು ಎಂದು ವಿಜಯವಾಣಿಗೆ ತಹಸೀಲ್ದಾರ್ ಶಿವರಾಜು ತಿಳಿಸಿದ್ದಾರೆ.