ಚಿಕ್ಕಬಳ್ಳಾಪುರ: ಅಬಕಾರಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.
ಗ್ರಾಮೀಣ ಭಾಗಗಳಲ್ಲಿ ಅಕ್ರಮವಾಗಿ ಮದ್ಯ ಮಾರಲಾಗುತ್ತಿದೆ. ಯುವಕರು ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಅನಧಿಕೃತ ಮದ್ಯದಂಗಡಿಗಳ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ, ಪ್ರಕರಣ ದಾಖಲಿಸುತ್ತಿದ್ದಾರೆ. ಆದರೆ, ಅಬಕಾರಿ ಇಲಾಖೆ ನಿರೀಕ್ಷಿತ ಮಟ್ಟದಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಮಿತಿ ಸದಸ್ಯರು ದೂರಿದರು.
ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಗ್ರಾಮೀಣ ಭಾಗದಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ನಡೆಸಿ, ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕುವಂತೆ ತಾಕೀತು ಮಾಡಿದರು.
ಮಂಚೇನಹಳ್ಳಿಯ ಬಾಬೂ ಜಗಜೀವನ್ ರಾಮ್ ಕಾಲನಿಗೆ ಮಂಜೂರಾಗಿರುವ ಸ್ಮಶಾನಕ್ಕೆ ದಾರಿ ಇಲ್ಲದೆ ಕೆರೆ ಅಂಗಳದಲ್ಲಿ ಶವಸಂಸ್ಕಾರ ನೆರವೇರಿಸುವಂತಾಗಿದೆ ಎಂದು ಸದಸ್ಯ ಜಿ.ವೆಂಕಟರಮಣಪ್ಪ ದೂರಿಗೆ ಉತ್ತರಿಸಿದ ಗೌರಿಬಿದನೂರು ತಹಸೀಲ್ದಾರ್ ಶ್ರೀನಿವಾಸ್, ಸ್ಥಳ ಪರಿಶೀಲಿಸಿ, ಸ್ಮಶಾನಕ್ಕೆ ದಾರಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಗುಡಿಬಂಡೆಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಳೇ ನ್ಯಾಯಾಲಯ ಕಟ್ಟಡ ಖಾಲಿಯಿದ್ದು ಸ್ವಚ್ಛತೆ ಮರಿಚೀಕೆಯಾಗಿದೆ. ಈ ಜಾಗವನ್ನು ಯಾವುದಾದರೂ ಒಂದು ಸರ್ಕಾರಿ ಕಚೇರಿ ಕೆಲಸಕ್ಕೆ ಅಥವಾ ಕಚೇರಿಗೆ ಬಳಸಿಕೊಂಡರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಜಿ.ವಿ.ವಿಶ್ವನಾಥ್ ಗಮನ ಸೆಳೆದರು.
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಂಬಂಧಿಸಿದ ಸ್ಮಶಾನಗಳ ದಾರಿ, ಪರಿಶಿಷ್ಟರ ಜಮೀನುಗಳ ಖಾತೆ ಬಗ್ಗೆ, ಜಮೀನು ಒತ್ತುವರಿ, ಅಂಬೇಡ್ಕರ್ ಭವನ, ವಾಲ್ಮೆಕಿ ಭವನಗಳಿಗೆ ಜಮೀನು ಮಂಜೂರು, ಬಾಲ್ಯವಿವಾಹ, ಪರಿಶಿಷ್ಟರ ಮೇಲಿನ ದೌರ್ಜನ್ಯ ಸೇರಿ ಇತರೆ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ತೇಜ್ ಆನಂದ್ ರೆಡ್ಡಿ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಸಿ.ವಿ.ಲಕ್ಷ್ಮಣ್‌ರಾಜ್, ಎಸ್.ಎನ್.ಅಂಜಿನಪ್ಪ, ವಿ.ಶ್ರೀನಿವಾಸ್, ಮಂಜುಳಾ, ಗಂಗಾಧರ್, ಸುಧಾಕರ್ ಇತರರಿದ್ದರು.