ಜಿಲ್ಲೆ

ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಮಹಿಳೆಯರು ಪ್ರತಿಭಟನೆ

ಹಾಸನ: ತಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಆಗ್ರಹಿಸಿ ಹೊಳೆನರಸೀಪುರ ತಾಲೂಕಿನ ವಳಂಬಿಗೆ ಗ್ರಾಮದ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಜಿಲ್ಲಾಧಿಕಾರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಗ್ರಾಮದ ಮಂಜುಳಾ, ಲಕ್ಷ್ಮೀ ಹಾಗೂ ರುಕ್ಮಿಣಿ ಮಾತನಾಡಿ, ಗ್ರಾಮದಲ್ಲಿ ಸುಮಾರು 600 ಮನೆಗಳಿದ್ದು, ಸುಮಾರು 12 ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರು ಕುಡಿತಕ್ಕೆ ದಾಸರಾಗಿದ್ದಾರೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಚಿಕ್ಕ ಚಿಕ್ಕ ವಯಸ್ಸಿನ ಮಕ್ಕಳೂ ಕುಡಿತಕ್ಕೆ ದಾಸರಾಗಿ ಶಾಲೆ ತೊರೆದು ಕುಳಿತಿದ್ದಾರೆ. ಅಲ್ಲದೆ ಕುಡಿದು ಬಂದ ಗಂಡಸರು ಮಹಿಳೆಯರು ಹಾಗೂ ಮಕ್ಕಳ ಮೇಲೆ ಹಲ್ಲೆ, ದೌರ್ಜನ್ಯ ಮಾಡುವ ಪ್ರಕರಣಗಳು ಹೆಚ್ಚಾಗಿವೆ ಆದುದರಿಂದ ಕೂಡಲೇ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು ಒತ್ತಾಯಿಸಿದರು.

ಈ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕ್ರಮಕೈಗೊಂಡಿಲ್ಲ ಪೋಲಿಸರು ಒಮ್ಮೊಮ್ಮೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಆದರೆ ಅವರು ಕೂಡ ಮಾರಾಟಗಾರರ ಜತೆ ಶಾಮೀಲಾಗಿ ಪ್ರಕರಣವನ್ನು ಅಲ್ಲಿಗೆ ಕೈ ಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಇನ್ನು ಮದ್ಯ ಮಾರಾಟ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ವಳಂಬಿಗೆ ಗ್ರಾಮದ ಮಹಿಳೆಯರಾದ ನೇತ್ರಾ, ಮಂಜುಳಾ, ಮಹಾಲಕ್ಷ್ಮಿ, ರಾಣಿ, ರೇಣುಕಾ, ಕಾಳಮ್ಮ, ರತ್ನಮ್ಮ, ಲಕ್ಷ್ಮಮ್ಮ, ಮಾದೇವಿ, ರುಕ್ಮಿಣಿ, ಪಾರ್ವತಿ, ಮಣಿ, ಇಂದ್ರಮ್ಮ, ರಾಣಿ ಇತರರು ಇದ್ದರು.