ಬೀದರ್‌ನಲ್ಲಿ ಮಂಗಳವಾರ ಡಿಸಿ ಶಿಲ್ಪಾ ಶರ್ಮಾ ಅಬಕಾರಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. 
ಜಿಲ್ಲೆ

ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳಿ

ಬೀದರ್: ಜಿಲ್ಲೆಯಲ್ಲಿ ಅಬಕಾರಿ ಅಕ್ರಮ ಚಟುವಟಿಕೆ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಅನ್ಯ ಇಲಾಖೆಗಳ ಜತೆ ಸಮನ್ವಯ ಸಾಧಿಸಿ ಹೆಚ್ಚಿನ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚಿಸಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಕಳ್ಳಬಟ್ಟಿ ಸಾರಾಯಿ, ಸೇಂದಿ, ಅಕ್ರಮ ಮದ್ಯ ಮತ್ತು ಮಾದಕ ವಸ್ತುಗಳ ನಿರ್ಮೂಲನೆ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಲು ಅಬಕಾರಿ ಇಲಾಖೆಗೆ ಎಲ್ಲ ತಹಸೀಲ್ದಾರರು ಸಹಕಾರ ನೀಡುವಂತೆ ನಿರ್ದೇಶನ ನೀಡಿದರು.

ತಹಸೀಲ್ದಾರರು ಕಳ್ಳಬಟ್ಟಿ, ಸೇಂದಿ ಮತ್ತು ಅಕ್ರಮ ಮದ್ಯ ಮತ್ತು ಮಾದಕ ವಸ್ತುಗಳ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಸ್ಥಾಯಿ ಸಮಿತಿ ಸದಸ್ಯರ ಪ್ರತಿ ತಿಂಗಳ ಸಾಧನೆಗಳ ಪರಾಮರ್ಶಿಸಿ ವರದಿ ಸಲ್ಲಿಸಬೇಕು. ಅಬಕಾರಿ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿರುವ ವಾಹನಗಳನ್ನು ಇತರರಿಗೆ ಪರಭಾರೆ ಮಾಡದಂತೆ ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಿದರು.