ಜೇವರ್ಗಿ: ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಪಡಿತರ ಮಾರಾಟ ತಡೆಯಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕನ್ನಡ ಮತ್ತು ದಲಿತ ಪರ ಒಕ್ಕೂಟ ತಾಲೂಕು ಘಟಕದವತಿಯಿಂದ ಪಟ್ಟಣದ ತಹಸಿಲ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಜೈ ಕನ್ನಡಿಗರ ಸೇನೆ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ, ರಾಷ್ಟ್ರೀಯ ಸಮಾಜ ಪಕ್ಷ, ಕರವೇ, ಡಾ.ಬಾಬು ಜಗಜೀವನರಾಂ ಯುವಕರ ಸಂಘ, ಅಂಬೇಡ್ಕರ್ ಸೇನೆ ಯುವ ಘಟಕ, ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ, ಜಯ-ಕನರ್ಾಟಕ ಸಂಘಟನೆ, ಬಂಜಾರಾ ರಕ್ಷಣಾ ವೇದಿಕೆ ಸೇರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಸಿದರಾಯ ಭೋಸಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕರವೇ ಸಂಚಾಲಕ ಮಂಜುನಾಥ ನಾಲವಾರಕರ್ ಮಾತನಾಡಿ, ತಾಲೂಕಿನಾದ್ಯಂತ ಅಕ್ರಮ ಪಡಿತರ ಅಕ್ಕಿ ಮಾರಾಟ ಮಾಡಲಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಇದನ್ನು ತಡೆಯಲು ಹೋದ ಸಾಮಾಜಿಕ ಕಾರ್ಯ ಕರ್ತರ ಮೇಲೆ ಅಕ್ರಮ ಪಡಿತರ ಮಾರಾಟಗಾರರು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದ್ದರಿಂದ ಅಕ್ರಮ ಪಡಿತರ ಸಾಗಾಟದ ಹಿಂದೆ ಇರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಾಮಾಜಿಕ ಹೋರಾಟಗಾರರ ಮೇಲೆ ದಾಖಲಿಸಲಾದ ಸುಳ್ಳು ಪ್ರಕರಣವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರರಾದ ನಾರಾಯಣರೆಡ್ಡಿ, ಜಿ.ಶಿವಶಂಕರ, ರವಿಚಂದ್ರ ಗುತ್ತೇದಾರ್, ಶ್ರವಣಕುಮಾರ ನಾಯಕ, ದೇವಿಂದ್ರ ಚಿಗರಳ್ಳಿ, ಶಿವುಕುಮಾರ ಕಟ್ಟಿಮನಿ, ಅನೀಲಕುಮಾರ, ಕೃಷ್ಣಾ ಬೇಲೂರ, ಶಿವುಕುಮಾರ ಗುತ್ತೇದಾರ್, ವಿಕ್ರಂ ಬೇಲೂರ, ಅಂಬರೀಶ, ಮಲ್ಲಿಕಾಜರ್ುನ ಸರಡಗಿ ಮತ್ತಿತರರು ಇದ್ದರು.