ಧಾರವಾಡ: ಸಾರ್ವಜನಿಕ ರಸ್ತೆ, ಉದ್ಯಾನ ಹಾಗೂ ಇತರ ಸ್ಥಳಗಳಲ್ಲಿನ ಅನಧಿಕೃತ ಧಾರ್ವಿುಕ ಕಟ್ಟಡಗಳನ್ನು ಗುರುತಿಸಲು ಹೊಸದಾಗಿ ಸಮೀಕ್ಷೆ ಕೈಗೊಂಡು ಜ. 31ರೊಳಗೆ ಎಲ್ಲ ಗ್ರಾಮಲೆಕ್ಕಾಧಿಕಾರಿಗಳು ತಹಸೀಲ್ದಾರರಿಗೆ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮೀಕ್ಷೆ ನಡೆಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಮುಖ್ಯಸ್ಥರಿಂದ ನಿಯೋಜನೆಗೊಂಡ ಸಿಬ್ಬಂದಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಫೆಬ್ರವರಿಯಲ್ಲಿ ತಹಸೀಲ್ದಾರರು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮಾಹಿತಿ ಕ್ರೋಡೀಕರಿಸಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರಿಶೀಲಿಸಿ ಮಾ. 15ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಸವೋಚ್ಚ ನ್ಯಾಯಾಲಯದ ಆದೇಶದಂತೆ 2009ರ ಸೆ. 29 ಸಮೀಕ್ಷೆಗೆ ಕಟ್ಆಫ್ ದಿನಾಂಕ. ಈ ದಿನಾಂಕದ ನಂತರ ನಿರ್ವಿುಸಿರುವ ಅನಧಿಕೃತ ಧಾರ್ವಿುಕ ಕಟ್ಟಡಗಳ ಮಾಹಿತಿ ನೀಡಲು ಜನರಿಗೂ ಅವಕಾಶವಿದೆ. ಮಾಹಿತಿ ನೀಡಿದ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಜಿಲ್ಲೆಯಲ್ಲಿ 330 ಅನಧಿಕೃತ ಧಾರ್ವಿುಕ ಕಟ್ಟಡಗಳನ್ನು ಗುರುತಿಸಿದ್ದು, ಅವುಗಳು ಮುಜರಾಯಿ ಅಥವಾ ವಕ್ಪ್ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಮಾತನಾಡಿ, ಸಮೀಕ್ಷೆ ಕಾರ್ಯದಲ್ಲಿ ನಿರತವಾಗುವ ಸರ್ಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು. ಈ ಕಾರ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಸಿ. ಸತೀಶ, ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಮಹಾನಗರ ಡಿಸಿಪಿ ಎಲ್. ನಾಗೇಶ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಹುಡಾ ಆಯುಕ್ತ ನಾಗರಾಜ ಕುಮ್ಮಣ್ಣವರ, ತಹಸೀಲ್ದಾರರು, ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಇತರರು ಇದ್ದರು.
ಆಸ್ಪತ್ರೆಗಳ ನಿರ್ವಹಣೆ ಸಮರ್ಪಕವಾಗಿರಲಿ
ಧಾರವಾಡ: ಜಿಲ್ಲಾ ಆಸ್ಪತ್ರೆ ಹಾಗೂ ಎಲ್ಲ ತಾಲೂಕಿನ ಸರ್ಕಾರಿ ಆಸ್ಪತ್ರೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಜನರ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಿದೆ. ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ಸಾಧನೆ ತೃಪ್ತಿಕರವಾಗಿಲ್ಲ. ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನಾ ಅಭಿವೃದ್ಧಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯೋಜನೆ ಅನುಷ್ಠಾನದಲ್ಲಿ ಜಿಲ್ಲಾ ಆಸ್ಪತ್ರೆ 2 ತಿಂಗಳಿನಿಂದ ರಾಜ್ಯದಲ್ಲಿ ಮೊದಲ ಸ್ಥಾನ, ಹುಬ್ಬಳ್ಳಿಯ ಕಿಮ್್ಸ 4ನೇ ಸ್ಥಾನದಲ್ಲಿದೆ. ತಾಲೂಕು ಆಸ್ಪತ್ರೆಗಳಲ್ಲಿ ನವಲಗುಂದ ಆಸ್ಪತ್ರೆ ಉತ್ತಮ ಸ್ಥಾನ ಹೊಂದಿರುವುದು ಅಭಿನಂದನೀಯ. ಬರುವ ದಿನಗಳಲ್ಲಿ ಕಾರ್ಯ ಕ್ಷಮತೆ ಹೆಚ್ಚಿಸಿಕೊಂಡು ಇನ್ನಷ್ಟು ಉನ್ನತ ಸ್ಥಾನಕ್ಕೆ ಏರಬೇಕು. ಆಸ್ಪತ್ರೆಗಳನ್ನು ನಮ್ಮ ಮನೆಗಳ ರೀತಿಯಲ್ಲಿ ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ವೈದ್ಯಕೀಯ ಯಂತ್ರೋಪಕರಣಗಳು, ಕಟ್ಟಡಗಳ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ 52 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 11 ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟು 64 ಆಸ್ಪತ್ರೆಗಳನ್ನು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ. 2018ರ ಅಕ್ಟೋಬರ್ನಿಂದ 2019ರ ಡಿಸೆಂಬರ್ 31ರ ವರೆಗೆ 122 ಕೇಂದ್ರಗಳ ಮೂಲಕ 3,43,594 ಕಾರ್ಡ್ಗಳನ್ನು ವಿತರಿಸಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಡಾ. ಸುಜಾತಾ ಹಸವೀಮಠ, ಇಲಾಖೆ ಅಧಿಕಾರಿಗಳು, ಇತರರು ಇದ್ದರು.
ಧೂಮ್ರಪಾನ ವಲಯ ಕಡ್ಡಾಯ
ಧಾರವಾಡ: ಶಾಲಾ-ಕಾಲೇಜುಗಳ ಬಳಿ ಸಿಗರೆಟ್ ಮತ್ತು ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಪ್ರತ್ಯೇಕ ಧೂಮ್ರಪಾನ ವಲಯ ಗುರುತಿಸಿರಬೇಕು. ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಶನಿವಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮನ್ವಯ ಸಮಿತಿಯ ತ್ರೖೆ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂ ಅಧಿಕಾರಿಗಳು ಉದ್ಯಮ ಪರವಾನಗಿ ನೀಡುವಾಗ, ನವೀಕರಣ ಸಮಯದಲ್ಲಿ ಕಾಯ್ದೆಯ ಸೆಕ್ಷನ್ 4,5, 6 ಮತ್ತು 7 ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಅಂಗಡಿ ಮಾಲೀಕರಿಗೆ ಸೂಚಿಸಬೇಕು. ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ತೆರವುಗೊಳಿಸಿ ತನಿಖಾ ತಂಡಗಳೊಂದಿಗೆ ಕಡ್ಡಾಯವಾಗಿ ದಾಳಿಯಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕು. ಜಿಲ್ಲಾ ಮಟ್ಟದ ಸಮಿತಿಗಳ ಮಾದರಿಯಲ್ಲಿ ತಾಲೂಕು ಮಟ್ಟದಲ್ಲೂ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು ಎಂದರು.
ಜಿಲ್ಲಾ ಸರ್ವೆಕ್ಷಣಾ ಅಧಿಕಾರಿ ಡಾ. ಸುಜಾತಾ ಹಸವೀಮಠ ಮಾತನಾಡಿ, ಜಿಲ್ಲೆಯ 50 ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳೆಂದು ಘೊಷಿಸಲಾಗಿದೆ. ಬಿಆರ್ಟಿಎಸ್ ಬಸ್ ನಿಲ್ದಾಣಗಳಲ್ಲಿ ತಂಬಾಕು ನಿಷೇಧ ಫಲಕಗಳನ್ನು ಅಳವಡಿಸಲು ಕ್ರಮ ವಹಿಸಲಾಗಿದೆ ಎಂದರು.