ಔರಾದ್: ಮಾದಕ ವಸ್ತುಗಳ ಮಾರಾಟ ಮಾಡುವುದು ಬಿಟ್ಟು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಪ್ರತಿಯೊಬ್ಬರೂ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಭಾಲ್ಕಿ ಉಪ ವಿಭಾಗದ ಡಿವೈಎಸ್ಪಿ ಡಾ.ದೇವರಾಜ್ ಹೇಳಿದರು.
ಬುಧವಾರ ಇಲ್ಲಿ ಜರುಗಿದ ಮಾದಕ ವಸ್ತುಗಳ ಅಕ್ರಮ ಸಾಗಣೆ, ಸಂಗ್ರಹ ಹಾಗೂ ಮಾರಾಟ ತಡೆಗಟ್ಟುವ ಕುರಿತು ಜನ ಜಾಗೃತಿ ಅಭಿಯಾನದಲ್ಲಿ ಮಾತನಾಡಿ, ಮಾದಕ ವಸ್ತುಗಳ ಮಾರಾಟಕ್ಕೆ ಮಟ್ಟ ಹಾಕಲ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಹೀಗಾಗಿ ಇದರಲ್ಲಿ ತೊಡಗಿದವರು ಕೂಡಲೇ ಅಕ್ರಮ ದಂಧೆ ಬಿಟ್ಟು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಲು ಸಲಹೆ ನೀಡಿದರು.
ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ತಿಳಿ ಹೇಳಿ, ಅವರಿಗೆ ಉತ್ತಮವಾದ ಶಿಕ್ಷಣ ಕೊಡಿಸಬೇಕು. ಹಣಕ್ಕಿಂತ ಮಕ್ಕಳನ್ನೇ ಸಮಾಜದ ಆಸ್ತಿಗಳನ್ನಾಗಿ ಮಾಡುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಹೇಳಿದರು.
ತಾಲೂಕಿನ ಜಂಬಗಿ, ಪೋಮಾ ತಾಂಡಾ, ವಿಜಯನಗರ ತಾಂಡಾ, ವಡಗಾಂವ ಸೇರಿ ವಿವಿಧ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು. ಸಿಪಿಐ ರಾಘವೇಂದ್ರ, ಪಿಎಸ್ಐ ಪ್ರಭಾಕರ ಪಾಟೀಲ್, ಸುವರ್ಣಾ, ಅಹ್ಮದ್, ಸುಭಾಷ ಚೌಧರಿ, ಅಂಬಾದಾಸ ಕಾಡಗೆ, ಮಲ್ಲು ಮೇತ್ರೆ, ಚಂದ್ರಕಾಂತ ಶೆಟಕಾರ, ಶಿವಾಜಿರಾವ, ಆನಂದರಾವ ತಾಡಮಲ್ಲೆ ಇತರರಿದ್ದರು.