ಕಕ್ಕೇರಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಕರೆದಿದ್ದ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಪಿಎಸ್‌ಐ ಅಯ್ಯಪ್ಪ ಮಾತನಾಡಿದರು. ಬಾಲಪ್ಪ ದೇಸಾಯಿ, ನಂದಣ್ಣ ಗುಮೇದಾರ, ಚಂದ್ರು ವಜ್ಜಲ್, ಬುಚ್ಚಪ್ಪ ನಾಯಕ, ಮರೆಪ್ಪ ಕಾಂಗ್ರೆಸ್ ಇದ್ದರು. 
ಜಿಲ್ಲೆ

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ

ಕಕ್ಕೇರಾ: ಠಾಣಾ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಮತ್ತು ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರನ್ನು ಮುಲಾಜಿಲ್ಲದೆ ಕಾನೂನು ಶಿಕ್ಷೆಗೆ ಒಳಪಡಿಸುವುದಾಗಿ ಎಂದು ಪಿಎಸ್‌ಐ ಅಯ್ಯಪ್ಪ ಹೇಳಿದರು.

ಪಟ್ಟಣದ ಉಪ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಸ್‌ಸಿ, ಎಸ್‌ಟಿ ಕುಂದುಕೊರತೆ ಆಲಿಕೆ ಸಭೆ ನಡೆಸಿದ ಅವರು, ಪಟ್ಟಣದಲ್ಲಿ ಪರಿಶಿಷ್ಟರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಹಾಗೂ ಅಪಮಾನದಂಥ ವಿದ್ಯಮಾನ ಕಂಡಾಕ್ಷಣ ಮಾಹಿತಿ ನೀಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಹಿಳೆಯರು, ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಅನಗತ್ಯ ಕಿರಿಕಿರಿ, ಕೀಟಲೆ ನೀಡುವುದನ್ನು ಸಹಿಸಲಾಗದು. ಯುವಕರು ದೇಶದ ಆಸ್ತಿಯಾಗಿದ್ದು, ಶಿಸ್ತಿನಿಂದ ಶ್ರಮವಹಿಸಿ ಭವಿಷ್ಯ ರೂಪಿಸಿಕೊಂಡು ಇತರರಿಗೆ ಮಾದರಿಯಾಗಬೇಕು ವಿನಃ ಪೊಲೀಸ್ ಕೇಸ್‌ನಲ್ಲಿ ಸಿಕ್ಕಿ ಹಾಕಿಕೊಂಡು ಜೀವನ ಹಾಳು ಮಾಡಿಕೊಳ್ಳಬಾರದು ಎಂದು ತಿಳಿಹೇಳಿದರು.

ಹೋರಾಟಗಾರರಾದ ಚಂದ್ರು ವಜ್ಜಲ್, ಬುಚ್ಚಪ್ಪ ನಾಯಕ, ಮೌನೇಶ ಗುರಿಕಾರ, ಮರೆಪ್ಪ ಕಾಂಗ್ರೆಸ್ ಮಾತನಾಡಿ, ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮಟ್ಕಾ, ಜೂಜು, ಅಕ್ರಮ ಮದ್ಯ ಮಾರಾಟ ನಡೆದಿದ್ದು, ಕಡಿವಾಣ ಹಾಕಬೇಕು. ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಶಾಲಾ-ಕಾಲೇಜು ತರಗತಿ ಅಂತ್ಯದ ಅವಧಿಯಲ್ಲಿ ಪುಂಡರು ಹತ್ತಾರು ಬೈಕ್‌ಗಳಲ್ಲಿ ಆವರಣಕ್ಕೆ ನುಗ್ಗಿ ಬಾಲಕಿಯರಿಗೆ ಕಿರಿಕಿರಿ ನೀಡುತ್ತಿದ್ದು, ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಂಬೇಡ್ಕರ್ ಹಾಗೂ ವಾಲ್ಮೀಕಿ ವೃತ್ತದಲ್ಲಿ ಪೊಲೀಸರನ್ನು ನಿಯೋಜಿಸಬೇಕು. ಬುಧವಾರ ಸಂತೆ ದಿನವಾದ್ದರಿಂದ ಆಗುವ ಟ್ರಾಫಿಕ್ ಜಾಮ್ ತಪ್ಪಿಸಬೇಕು. ಹಗಲೂ-ರಾತ್ರಿ ಪೊಲೀಸ್ ಬಂದೋಬಸ್ತ್ ಚುರುಕುಗೊಳಿಸಬೇಕು. ಅಕ್ರಮ ಚಟುವಟಿಕೆ ಮೇಲೆ ನಿಗಾ ಇಡಲು ಅನುವಾಗುವಂತೆ ಕಟ್ಟಿರುವ ಸಿಸಿ ಕ್ಯಾಮರಾಗಳನ್ನು ದುರಸ್ತಿ ಮಾಡಬೇಕು ಎಂದು ಕೋರಿದರು.

ಪ್ರಮುಖರಾದ ಬಾಲಪ್ಪ ದೇಸಾಯಿ, ನಂದಣ್ಣ ಗುಮೇದಾರ, ತಿರುಪತಿ ರ‍್ಯಶಂಕರ, ಅಮರೇಶ ಗುಮೇದಾರ, ಶಿವು ದೊರೆ, ಭೀಮಣ್ಣ ಮ್ಯಾಗೇರಿ, ರಾಕೇಶ ಪಾಟೀಲ್, ಹುಲಗಪ್ಪ ಮ್ಯಾಗೇರಿ ಇತರರಿದ್ದರು. ಮುಖ್ಯಪೇದೆ ಯಲ್ಲಪ್ಪ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ ವಂದಿಸಿದರು.