ಕೆ.ಆರ್.ನಗರ: ತಾಲೂಕಿನ ಮಾರ್ಚಹಳ್ಳಿ ಗ್ರಾಮದಲ್ಲಿ ದಲಿತರ ಭೂಮಿಯಲ್ಲಿ ಮೇಲ್ವರ್ಗದ ಕೆಲ ವ್ಯಕ್ತಿಗಳು ಅಕ್ರಮವಾಗಿ ನಡೆಸುತ್ತಿರುವ ಗಣಿಗಾರಿಕೆಯನ್ನು ತಡೆಯುವಂತೆ ಒತ್ತಾಯಿಸಿ ಶುಕ್ರವಾರ ದಲಿತ ಪ್ರಗತಿ ಸಂಘಟನೆಗಳ ಒಕ್ಕೂಟದಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿ ಉಪತಹಸೀಲ್ದಾರ್ ಬಾಲಸುಬ್ರಮಣ್ಯಗೆ ಮನವಿ ಸಲ್ಲಿಸಲಾಯಿತು.
ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಮಾತನಾಡಿ, ತಾಲೂಕಿನ ಮಾರ್ಚಹಳ್ಳಿ ಗ್ರಾಮದ ಸರ್ವೆ ನಂ.200ರಲ್ಲಿ ಛತ್ರಸಿದ್ದಯ್ಯ ಅವರ ಜಮೀನಿನಲ್ಲಿ ಅನುಮತಿ ಇಲ್ಲದೇ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಸದರಿ ಸರ್ವೆ ನಂಬರ್‌ನಲ್ಲಿ 0.32 ಗುಂಟೆ ಜಾಗದಲ್ಲಿ ಗಣಿಗಾರಿಕೆ ನಡೆಸಲು ಡಿ.ವಸಂತ ಅವರಿಗೆ ಸರ್ಕಾರ ಅನುಮತಿ ನೀಡಿದೆ. ಇದರ ಜತೆಗೆ ಮಾದಯ್ಯ ಅವರ ಜಮೀನಿನಲ್ಲೂ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅಕ್ರಮವಾಗಿ ನಡೆಸುತ್ತಿರುವ ಗಣಿಗಾರಿಕೆಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ.ಕೆ.ಕೊಪ್ಪಲು ರಾಜಯ್ಯ, ಪುರಸಭಾ ಮಾಜಿ ಅಧ್ಯಕ್ಷ ಡಿ.ಕಾಂತರಾಜ್, ದಸಂಸ ತಾಲೂಕು ಅಧ್ಯಕ್ಷ ಎಂ.ಎಸ್.ಮಲ್ಲೇಶ, ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಎಂ.ಎಸ್.ನಂಜುಂಡಸ್ವಾಮಿ, ದಲಿತ ಮುಖಂಡರಾದ ಕೆಂಪಯ್ಯ, ಸಿದ್ದಾಪುರ ರಮೇಶ್, ಚಂದಗಾಲು ರಾಚಯ್ಯ, ಮಧುವನಹಳ್ಳಿ ಜೆಟ್ಟಿಪುಟ್ಟಸ್ವಾಮಿ, ಶಾಮಿಯಾನ ರಮೇಶ್, ಬ್ಯಾಡರಹಳ್ಳಿ ನವೀನ್, ಮೂಲೆಪೆಟ್ಲೂ ಶೇಖರ್, ನಿವೃತ್ತ ಉನ್ಯಾಸಕ ಕೃಷ್ಣ, ಚೌಕಹಳ್ಳಿ ಶಿವು, ನೊಂದ ಕುಟುಂಬದವರಾದ ಮಾದಯ್ಯ, ದರ್ಶನ್ ಇದ್ದರು.