ಜಿಲ್ಲೆ

ಅಕ್ರಮ ಗಣಿಗಾರಿಕೆ ಮತ್ತು ಟಿಪ್ಪರ್ ಸಂಚಾರ ವಿರೋಧಿಸಿ ಪ್ರತಿಭಟನೆ

ಚಾಮರಾಜನಗರ : ಗ್ರಾಮದ ಸಮೀಪದಲ್ಲಿರುವ ಗೋಮಾಳಗಳಲ್ಲಿ ಅಕ್ರಮವಾಗಿ ನಡೆಸುತ್ತಿರುವ ಗಣಿಗಾರಿಕೆಯನ್ನು ನಿಷೇಧ ಮಾಡಬೇಕು ಹಾಗೂ ಬೃಹತ್ ಟಿಪ್ಪರ್‌ಗಳ ಸಂಚಾರವನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಹಾಗೂ ಪಣ್ಯದಹುಂಡಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಪಣ್ಯದಹುಂಡಿ ಗ್ರಾಮದಲ್ಲಿ ಹಾದುಹೋಗಿರುವ ಚಾಮರಾಜನಗರ-ಮೈಸೂರು ಹೆದ್ದಾರಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ವಾಹನ ಸಂಚಾರವನ್ನು ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ವಿರುದ್ಧ ೋಷಣೆ ಕೂಗಿ, ಬಿತ್ತಿ ಪತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ, ತಾಲೂಕಿನ ಪಣ್ಯದಹುಂಡಿ ಹಾಗೂ ಹೆಗ್ಗೋಠಾರ ಸುತ್ತಮುತ್ತಲಿನ ಗ್ರಾಮಗಳ ಸಮೋಪದಲ್ಲಿರುವ ಗೋಮಾಳಗಳಲ್ಲಿ ಅಕ್ರಮವಾಗಿ ಗಣಿಗಾರಿಕೆಯನ್ನು ನಡೆಸಲಾಗುತ್ತಿದೆ. ಜಿಲ್ಲಾ ಟಾಸ್‌‌ಕೆೆರ್ಸ್ ಸಮಿತಿಯಲ್ಲೂ ಈ ಗಣಿಗಾರಿಕೆ ಪರವಾನಿಗೆ ರದ್ದುಪಡಿಸಲಾಗಿದೆ. ಎಗ್ಗಿಲ್ಲದೇ ಗಣಿಗಾರಿಕೆಯನ್ನು ನಡೆಸಲಾಗುತ್ತಿದೆ. ಈ ಕುರಿತು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸೂಕ್ತ ಕ್ರಮವಹಿಸಿಲ್ಲ ಎಂದು ದೂರಿದರು.

ಪಣ್ಯದಹುಂಡಿ-ಹೆಗ್ಗೋಠಾರ ರಸ್ತೆಯಲ್ಲಿ 40 ಟನ್ ತೂಕದ ಟಿಪ್ಪರ್‌ಗಳು ಸಂಚಾರ ಮಾಡುತ್ತಿದೆ. ಸುಮಾರು 3 ವರ್ಷಗಳಿಂದ ಪಣ್ಯದಹುಂಡಿ ಗ್ರಾಮದ ಒಳಗೆ ಯಾವುದೇ ಬೃಹತ್ ವಾಹನಗಳು ಸಂಚಾರ ಮಾಡುತ್ತಿರಲಿಲ್ಲ. ಇತ್ತೀಚೆಗೆ ಟಿಪ್ಪರ್‌ಗಳು ಓಡಾಡುವುದರಿಂದ ಗ್ರಾಮದ ಜನರಿಗೆ ಸಮಸ್ಯೆಯಾಗುತ್ತಿದೆ. ಹೆಗ್ಗೋಠಾರ ಮತ್ತು ಪಣ್ಯದಹುಂಡಿ ಗ್ರಾಮದಲ್ಲಿ ಪ್ರತಿಭಟನೆಯನ್ನು ನಡೆಸಲಾಗಿತ್ತು. ಈ ನಿಟ್ಟಿನಲ್ಲಿ ರೈತ ಸಂಘದ ನೇತೃತ್ವದಲ್ಲಿ ಚಾಮರಾಜನಗರ-ಮೈಸೂರು ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಗಿರಿಜಾ ಅವರು ಭೇಟಿ ನೀಡಿ, ಗ್ರಾಮದ ಒಳಗೆ ಯಾವುದೇ ರೀತಿಯ ಟಿಪ್ಪರ್‌ಗಳು ಸಂಚಾರ ಮಾಡದಂತೆ ಕ್ರಮವಹಿಸಲಾಗುತ್ತದೆ. ಜಿಲ್ಲಾ ಟಾಸ್‌‌ಕೆೆರ್ಸ್ ಸಮಿತಿಯಲ್ಲಿ ಪರವಾನಗಿ ಇಲ್ಲದ ಕ್ವಾರಿಗಳಲ್ಲಿ ಗಣಿಗಾರಿಕೆ ನಡೆಸದಂತೆ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಪ್ರತಿಭಟನೆಯ ಪರಿಣಾಮವಾಗಿ ಚಾಮರಾಜನಗರ-ಮೈಸೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಯಿತು, ವಾಹನ ಸವಾರರು ಟ್ರಾಫಿಕ್‌ನಿಂದಾಗಿ ಕೆಲಕಾಲ ಸಮಸ್ಯೆ ಅನುಭವಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಾಜಿಪುರ ಕುಮಾರ್, ಸಂಘಟನಾ ಕಾರ್ಯದರ್ಶಿ ಹೆಗ್ಗೋಠಾರ ವಿಜಯ್, ತಾಲೂಕು ಅಧ್ಯಕ್ಷ ಮಹೇಶ್, ಹೆಗ್ಗೋಠಾರ ಮಾದಪ್ಪ, ಕುಮಾರ್, ಮಹೇಶ್, ಜಯಪ್ಪ, ರಘು ಕಲ್ಪುರ, ಶಿವರುದ್ರಪ್ಪ, ಭಾಗ್ಯಮ್ಮ, ಸವಿತಾ, ಕವಿತಾ, ರೂಪ ಹಾಗೂ ಪಣ್ಯದಹುಂಡಿ ಗ್ರಾಮಸ್ಥರು ಭಾಗವಹಿಸಿದ್ದರು.