ಚಿತ್ರದುರ್ಗ: ಮುಖ್ಯ ಖನಿಜ ಮತ್ತು ಉಪ ಖನಿಜ ಗಣಿ ಗುತ್ತಿಗೆಗಳಿಗೆ ನಿಗದಿಪಡಿಸಿರುವ ರಾಜಸ್ವದ ಗುರಿ ಸಾಧಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಟಾಸ್ಕ್‌ಫೋರ್ಸ್ (ಗಣಿ), ಜಿಲ್ಲಾ ಮರಳು ಸಮಿತಿ, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು.
ಗಣಿ ಗುತ್ತಿಗೆಗಳಿಗೆ ನಿಗದಿಪಡಿಸಿರುವ ರಾಜಸ್ವ ಗುರಿ ತಲುಪಲು ಅಗತ್ಯ ಕ್ರಮವಹಿಸಬೇಕು. ಅನಧಿಕೃತ ಗಣಿಗಾರಿಕೆ, ಸಾಗಣೆ ಹಾಗೂ ದಾಸ್ತಾನು ತಡೆ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ‌್ಯನಿರ್ವಹಿಸಬೇಕು. ಕಂದಾಯ, ಪೊಲೀಸ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಪ್ರಕರಣ ದಾಖಲಿಸಬೇಕು ಎಂದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್ ಮಾತನಾಡಿ, ವೇದಾಂತ ಮಿನರಲ್ಸ್ ಅವರು ಗಣಿ ಚಟುವಟಿಕೆ ಸ್ಥಗಿತಗೊಳಿಸಿದ ಕಾರಣ ರಾಜಸ್ವ ಗುರಿ ತಲುಪಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ನಿಗದಿತ ಗುರಿ ತಲುಪಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕಲ್ಲು ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಮಂಜೂರಾತಿಗೆ ಬಾಕಿ ಇರುವ 160 ಅರ್ಜಿಗಳನ್ನು ಪರಿಶೀಲಿಸಿ ಒಂದು ತಿಂಗಳೊಳಗೆ ಎನ್‌ಒಸಿ ನೀಡುವಂತೆ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಗೋಮಾಳ ಹಾಗೂ ಪಟ್ಟಾ ಜಮೀನುಗಳಲ್ಲಿ ದಾಸ್ತಾನಿರುವ ಕಬ್ಬಿಣದ ಅದಿರು ರಾಶಿಗಳನ್ನು ನಿಯಮಾನುಸಾರ ವಿಲೇವಾರಿಗೆ ಸಭೆ ಅನುಮೋದಿಸಿತು. ಮೊಳಕಾಲ್ಮೂರು ತಾಲೂಕು ವ್ಯಾಪ್ತಿ ಪಟ್ಟಾ ಜಮೀನುಗಳಲ್ಲಿ ಮರಳು ಗಣಿ ಗುತ್ತಿಗೆ ಕೋರಿದ ಅರ್ಜಿಗಳ ಮಂಜೂರಾತಿಗೆ ಕ್ರಮವಹಿಸಲು ಡಿಸಿ ತಿಳಿಸಿದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಸ್‌ಪಿ ಧರ್ಮೇಂದರ್‌ಕುಮಾರ್‌ಮೀನಾ, ಎಸಿ ಎಂ.ಕಾರ್ತಿಕ್, ಡಿಸಿಎಫ್ ಟಿ.ರಾಜಣ್ಣ, ಆರ್‌ಟಿಒ ಭರತ ಎಂ.ಕಾಳಿಸಿಂಗೆ, ಲೋಕೋಪಯೋಗಿ ಇಲಾಖೆ ಇಇ ಮಲ್ಲಿಕಾರ್ಜುನ್, ಹಿರಿಯ ಭೂ ವಿಜ್ಞಾನಿ ಕೆ.ಎಸ್.ನಾಗೇಂದ್ರಪ್ಪ, ವಿಜ್ಞಾನಿಗಳಾದ ನಯಾಜ್ ಖಾನ್, ಉಮಾಪತಿ ಮತ್ತಿತರರು ಇದ್ದರು.
*ಮರಳು ಗುಣಮಟ್ಟ ಪರೀಕ್ಷೆ ಅಗತ್ಯ
ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕುಗಳ ವ್ಯಾಪ್ತಿ ನದಿ ಪಾತ್ರದಲ್ಲಿ ಟೆಂಡರ್-ಕಂ-ಹರಾಜು ಮೂಲಕ ಮಂಜೂರು ಮಾಡಿದ ಮರಳು ಗಣಿ ಗುತ್ತಿಗೆ, ಮರಳು ಲೈಸೆನ್ಸ್ ಪ್ರದೇಶಗಳ ಅವಧಿ ಮುಕ್ತಾಯಗೊಂಡಿದೆ. ಕೆಲವೊಂದು ಮರಳು ಸ್ಟಾಕ್‌ಯಾರ್ಡ್‌ಗಳಲ್ಲಿ ದಾಸ್ತಾನಿರುವ ಮರಳು ವಿಲೇವಾರಿ ಪೂರ್ವ ಲೋಕೋಪಯೋಗಿ ಇಲಾಖೆಯಿಂದ ಗುಣಮಟ್ಟದ ವರದಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.