ಜಿಲ್ಲೆ

ಅಕ್ರಮ ಎಸಗಿದವರ ವಿರುದ್ಧ ಕ್ರಮ

ಬೀದರ್: ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳಿಗೆ ವೇಗ ನೀಡಿ, ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಅಕ್ರಮ ಎಸಗಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ಖಾನ್ ತಿಳಿಸಿದರು.
ನಗರಸಭೆಯಲ್ಲಿ ಆಯೋಜಿಸಿದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ನಗರೋತ್ಥಾನ, ಕುಡಿಯುವ ನೀರು, ಯುಜಿಡಿ, ಅಮೃತ, ವಸತಿ ಸೇರಿ ಇತರ ಕೆಲಸಗಳನ್ನು ಚುರುಕಾಗಿ ನಡೆಯಬೇಕು. ಈಗಾಗಲೇ ಟೆಂಡರ್ ಪಡೆದಿರುವ ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಪರವಾನಗಿ ನವೀಕರಣ ಮಾಡಿಕೊಳ್ಳದ ಅಂಗಡಿ ಮಾಲಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ನಿಗದಿತ ಗಡುವಿನೊಳಗೆ ಪರವಾನಗಿ ನವೀಕರಣ ಮಾಡಿಸಿಕೊಳ್ಳದವರ ವಿರುದ್ಧ ಕ್ರಮ ಜರುಗಿಸಬೇಕು. ಜಿಲ್ಲೆಯ ಕೆಲವೆಡೆ ಅನಧಿಕೃತವಾಗಿ ಬ್ಯಾನರ್ ಅಳವಡಿಸುತ್ತಿದ್ದು, ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಗರಸಭೆ ಅಡಿಯಲ್ಲಿ ಕೊರೆಸಿದ ಕೊಳವೆಬಾವಿಗಳಿಗೆ ಗುಣಮಟ್ಟದ ಮೋಟಾರ್ ಅಳವಡಿಸದ ಕಾರಣ ದುರಸ್ತಿ ಕೆಲಸ ಜಾಸ್ತಿಯಾಗಿದೆ. ಹೀಗಾಗಿ ಟೆಂಡರ್ ಕರೆಯುವ ವೇಳೆ ಅದರಲ್ಲಿ ನಿಯಮಗಳನ್ನು ಅಳವಡಿಸಬೇಕು ಎಂದರು.
ನಗರಸಭೆ ಅಕ್ರಮದ ಜಾಲ ಎಂಬ ಆರೋಪಗಳಿವೆ. ಈ ಹಿಂದೆ ನಾನು ಸಹ ಬೀದರ್ ನಗರಸಭೆ ಅಕ್ರಮದ ವಿರುದ್ಧ ಹೋರಾಟ ಮಾಡಿರುವೆ. ಸದ್ಯ ನಾನೇ ಈ ಇಲಾಖೆ ಮಂತ್ರಿಯಾಗಿದ್ದೇನೆ. ಇಲಾಖೆಯನ್ನು ಶುದ್ಧೀಕರಣಗೊಳಿಸುವ ಜವಾಬ್ದಾರಿ ನನ್ನ ಮೇಲಿದೆ. ಎಲ್ಲರೂ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದಿದ್ದರೆ ಕ್ರಮ ಅನಿವಾರ್ಯ ಎಂದು ಹೇಳಿದರು.
ಈ ಹಿಂದೆ ಅರ್ಹತೆ ಮೀರಿ ವಿವಿಧ ಹುದ್ದೆಗಳಿಗೆ ನಿಯೋಜನೆಗೊಂಡಿದ್ದವರನ್ನು ಮೂಲ ಸ್ಥಾನಕ್ಕೆ ಕಳಿಸಬೇಕು. ಹಲವು ವರ್ಷದಿಂದ ಒಂದೇ ಕಡೆ ಇದ್ದವರನ್ನೂ ಬೇರೆಡೆ ವರ್ಗ ಮಾಡಬೇಕೆಂದು ಸೂಚಿಸಿದರು.
ಬೀದರ್ ನಗರಾಭಿವೃದ್ಧಿ ಕೋಶದ ಯೋಜನಾಕಾರಿ ಮೋತಿಲಾಲ್ ಲಮಾಣಿ, ನಗರಸಭೆ ಆಯುಕ್ತ ಶಿವರಾಜ ರಾಠೋಡ್ ಇತರರಿದ್ದರು.