ಜಿಲ್ಲೆ

ಅಕ್ರಮ ಆಸ್ತಿ ಆರೋಪ ಮಂಗಳೂರು ಹಾಗು ಉಡುಪಿಯಲ್ಲಿ ಎಸಿಬಿ ದಾಳಿ

ಮಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆರೋಪದಲ್ಲಿ ಮಂಗಳೂರು ಹಾಗು ಉಡುಪಿಯಲ್ಲಿ ಇಬ್ಬರು ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿನ ಜಿಲ್ಲಾ ನಗರಾಭಿವೃದ್ಧಿ ಘಟಕದ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಿ. ಶ್ರೀಧರ್ ಹಾಗು ಉಡುಪಿ ಜಿಪಂ ಕಚೇರಿಯಲ್ಲಿರುವ ಗ್ರಾಮೀಣಾಭಿವೃದ್ಧಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೃಷ್ಣ ಹೆಬ್ಸೂರು ಅವರ ದೊಡ್ಡಣಗುಡ್ಡಯಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಶ್ರೀಧರ್ ಅವರ ಮನೆ ಹಾಗೂ ಕಚೇರಿಗೆ ಎಸಿಬಿ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ರಾಜ್ಯದ ಒಂಬತ್ತು ಕಡೆ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ, ಕಚೇರಿಗೆ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ‌. ಈ ಕಾರ್ಯಾಚರಣೆಯ ಭಾಗವಾಗಿ ಮಂಗಳೂರಲ್ಲೂ ಎಸಿಬಿ ದಾಳಿ‌‌ ನಡೆದಿದೆ.

ಮಂಗಳೂರಿನಲ್ಲಿ ಜಿ.ಶ್ರೀಧರ್ ಅವರಿಗೆ ಸೇರಿದ ಮನೆ ಹಾಗೂ ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಘಟಕಕ್ಕೆ ದಾಳಿ‌ ನಡೆಸಿದ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ಅಧಿಕಾರಿಗಳು ಶ್ರೀಧರ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಎಸಿಬಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.