ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ರಾಜ್ಯ ಸರ್ಕಾರ ನೀಡಿದ್ದ ಗಡುವು ಮುಗಿದಿದೆ. ಇದೀಗ ‘ಮಾಡು ಇಲ್ಲವೇ ಮಡಿ’ ಹೋರಾಟಕ್ಕೆ ಸಮಾಜ ಸಜ್ಜಾಗಿದ್ದು, ಅಕ್ಟೋಬರ್ ಆರಂಭದಿಂದಲೇ ಮೀಸಲಾತಿಗಾಗಿ ಸತ್ಯಾಗ್ರಹ ಮತ್ತೆ
ಆರಂಭಗೊಳ್ಳಲಿದೆ ಎಂದು ಕೂಡಲಸಂಗಮದ ಪಂಚಮ ಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಶ್ರೀ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಗಾಂಧಿಭವನದಲ್ಲಿ ಅಖಿಲ ಭಾರತ ಪಂಚಮ ಸಾಲಿ ಮಹಾಸಭಾ ಜಿಲ್ಲಾ ಘಟಕವು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂ ಜಯ ಸ್ವಾಮೀಜಿ ನೇತೃತ್ವ ದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
ಹಕ್ಕೊತ್ತಾಯದ ಅಭಿಯಾನ: ಸರ್ಕಾರ ನಿರ್ಲಕ್ಷೃ ಮಾಡುತ್ತಿರುವ ಕಾರಣದಿಂದ ಮಲೆಮಹದೇಶ್ವರದಿಂದ ಆರಂಭಗೊಂಡಿರುವ ಅಭಿಯಾನಕ್ಕೆ ಈಗ 30 ದಿನ ತುಂಬಿದೆ. ಇದು ಸಂಭ್ರಮದ ಸಮಾವೇಶವಲ್ಲ. ಬದಲಾಗಿ ಹಕ್ಕೊತ್ತಾಯದ ಅಭಿಯಾನ. ಪಂಚಮಸಾಲಿಗಳ ಹೋರಾಟ. ಸಮು ದಾಯಕ್ಕೆ ಪ್ರತ್ಯೇಕ ಪೀಠ ಆರಂಭಗೊಂಡಿದ್ದ ಸ್ಥಳದಲ್ಲಿ ಈಗ ಸಮುದಾಯದ ಅಭಿವೃದ್ಧಿಗಾಗಿ ಪ್ರತಿಭಟನೆ ಆರಂಭಗೊಂಡಿದ್ದು, ಶತಮಾನಗಳ ನಂತರ ಪಂಚಮಸಾಲಿಗಳು ಎಚ್ಚೆತ್ತುಕೊಂಡಿದ್ದಾರೆ ಎಂದು ತಿಳಿಸಿದರು.
ಸಮಸ್ತ ಸಮುದಾಯದ ಎಲ್ಲ ಅಭಿವೃದ್ಧಿಗಾಗಿ ನಡೆಯುವ ಹೋರಾಟಗಳಲ್ಲಿ ಭಾಗವಹಿಸುತ್ತ ಬಂದಿರುವ ಪಂಚಮಸಾಲಿ ಜನತೆ ಇದೇ ಮೊದಲು ತನ್ನ ಸಮುದಾಯಕ್ಕಾಗಿ ಧ್ವನಿ ಎತ್ತಿದ್ದಾರೆ. 1994ರಿಂದ ಮೀಸಲಾತಿಗಾಗಿಯೇ ಸಂಘಟನೆ ಆರಂಭಿಸಿದ್ದರೂ ಪಂಚಮ ಸಾಲಿಗಳ ಬೇಡಿಕೆ ರಾಜಕೀಯ ಭಾಷಣಗಳಿಗೆ ಮಾತ್ರ ಸೀಮಿತವಾಗಿತ್ತು. ಪ್ರತ್ಯೇಕ ಪೀಠ ಸ್ಥಾಪನೆ ಆದ ಮೇಲೆ ಸತತ 12 ವರ್ಷಗಳಿಂದ ಹೋರಾಟ ಆರಂಭಿಸಿದ್ದೇವೆ ಎಂದು ಕೂಡಲಸಂಗಮ ಶ್ರೀ ತಿಳಿಸಿದರು. ನ್ಯಾಯವಾದಿ ದಿನೇಶ ಪಾಟೀಲ, ಆರ್.ಕೆ. ಪಾಟೀಲ, ಪಂಚನಗೌಡ ದ್ಯಾಮನಗೌಡರ, ರೋಹಿಣಿ ಪಾಟೀಲ, ರುದ್ರಣ್ಣ ಚಂದರಗಿ, ಪಾಲಿಕೆಯ ಸದಸ್ಯರು, ಇತರರು ಇದ್ದರು.
ಶಾಸಕ ಬಸವನಗೌಡ ಪಾಟೀಲ ಯತ್ನಾಳ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ನಮ್ಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಕೆಲವರು ಕೂಡಲಸಂಗಮ ಸ್ವಾಮೀಜಿ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಪಾದಯಾತ್ರೆ ವೇಳೆ ಅಡ್ಡಿಪಡ್ಡಿಸಿದ್ದರು. ಇದೀಗ ಅವರಿಗೇ ಮುಖಭಂಗವಾಗಿದೆ. ಮೀಸಲಾತಿ ಹೋರಾಟ ಆರಂಭಿಸಿರುವ ಸ್ವಾಮೀಜಿಯವರನ್ನೇ ಬದಲಾವಣೆ ಮಾಡಿ ಪೀಠಕ್ಕೆ ಬೇರೆ ಸ್ವಾಮೀಜಿಯನ್ನು ತರುವ ಪ್ರಯತ್ನ ನಡೆದಿದೆ. ಇದಕ್ಕೆ ಶ್ರೀಗಳು ಭಯ ಪಡುವ ಅಗತ್ಯವಿಲ್ಲ. ನಮ್ಮ ಸಮಾಜದ ಪ್ರತಿಯೊಬ್ಬರೂ 100 ರೂ. ಕೊಟ್ಟರೆ ಹತ್ತು ಕೋಟಿ ರೂ. ಸಂಗ್ರಹವಾಗುತ್ತದೆ. ಈ ಹಣದಲ್ಲಿ ನಿಮಗೆ ಹೊಸದಾದ ಮಠ ಸ್ಥಾಪಿಸಿ ಕೊಡುತ್ತೇವೆ ಎಂದು ಹೇಳಿದರು. 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೇ.99ರಷ್ಟು ಸ್ಪಂದಿಸುತ್ತಾರೆ ಎಂಬ ವಿಶ್ವಾಸ ಇದೆ. ಸದನದಲ್ಲಿ ಈ ಕುರಿತು ಉತ್ತರ ನೀಡಿದ್ದಾರೆ. ಒಂದು ವೇಳೆ ಅವರೂ ನಿರ್ಲಕ್ಷಿಸಿದಲ್ಲಿ ಸಮುದಾಯದ 25 ಲಕ್ಷದಷ್ಟು ಜನರು ಸೇರಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದರು.
ರಾಜ್ಯದ ಒಟ್ಟು ಲಿಂಗಾಯತ ಸಮಾಜದಲ್ಲಿ ಶೇ. 80ರಷ್ಟು ಪಂಚಮಸಾಲಿಗಳಿದ್ದಾರೆ ಎಂಬುದನ್ನು ಸರ್ಕಾರ ಮರೆಯಬಾರದು. ನಮ್ಮ ಸಮಾಜಕ್ಕೆ ನ್ಯಾಯಯುತವಾಗಿ ಆರ್ಥಿಕ, ಸಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಸೌಲಭ್ಯ ಸಿಗಬೇಕು. ಸಮಾಜದಲ್ಲಿನ ಬಡ ಮಕ್ಕಳಿಗಾಗಿ ಈ ಹೋರಾಟ. ನಮ್ಮ ಸಮಾಜ ಜಾಗೃತರಾಗಿ ಸಂಘಟಿತವಾಗಬೇಕು.| ಎ.ಬಿ. ಪಾಟೀಲ ಮಾಜಿ ಸಚಿವ2ಎ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಪಕ್ಷಾತೀತ ವಾಗಿದೆ. ರಾಜಕೀಯ, ಅಧಿಕಾರಕ್ಕಾಗಿ ಈ ಹೋರಾಟ ಅಲ್ಲ. ಎಲ್ಲ ವರ್ಗಗಳಿಗೆ ಸಿಗುತ್ತಿರುವ ಸೌಲಭ್ಯ ನಮ್ಮ ಸಮಾಜಕ್ಕೆ ಸಿಗಬೇಕಿದೆ. ಸಮಾಜದ ಋಣ ತೀರಿಸಲು ನಾನು ಹೋರಾಟದಲ್ಲಿ ಭಾಗಿಯಾಗಿದ್ದೇನೆ.| ಎಚ್.ಎಸ್. ಶಿವಶಂಕರ, ಮಾಜಿ ಶಾಸಕ