ಜಿಲ್ಲೆ

ಅಕ್ಕಮಹಾದೇವಿ ಅಭಿವ್ಯಕ್ತಿ ಸಂಸ್ಕೃತಿಯ ಸಂಕೇತ:  ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಮತ

ಮೈಸೂರು: ಶರಣೆ ಅಕ್ಕಮಹಾದೇವಿ ಸಾಮಾನ್ಯ ಮಹಿಳೆ ಆಗಿರಲಿಲ್ಲ. ಅವರು ಮಹಿಳಾ ಸ್ವಾತಂತ್ರ್ಯ ಮತ್ತು ಜಾಗೃತಿಗೆ ಸಾಕ್ಷಿಪ್ರಜ್ಞೆ. ಅಭಿವ್ಯಕ್ತಿ ಸಂಸ್ಕೃತಿಯ ಸಂಕೇತ. ಅವರು ತೋರಿದ ದಾರಿಯಲ್ಲಿ ಎಲ್ಲರೂ ಸಾಗಬೇಕು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ಜೆ.ಪಿ.ನಗರದ ಜೆಎಸ್‌ಎಸ್ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ನಾದಹಂಸಿನಿ ಭಜನಾ ಸಂಘದ 12ನೇ ವಾರ್ಷಿಕೋತ್ಸವ, ವೀರಾಗಿಣಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ನಡೆದ ಆಂದೋಲನದಲ್ಲಿ ತಮ್ಮದೇ ಆದ ವ್ಯಕ್ತಿತ್ವದಿಂದ ಅಕ್ಕಮಹಾದೇವಿ ಅನುಭವ ಮಂಟಪಕ್ಕೆ ಗೌರವ ತಂದು ಕೊಟ್ಟರು. ಒಬ್ಬ ಹೆಣ್ಣು ಮಗಳು ವೀರಾಗಿಣಿಯಾಗಿ ಸಂಕಲ್ಪ ಮಾಡಿ ಬದ್ಧತೆಯಿಂದ ನಡೆದುಕೊಂಡರೆ ಲೋಕಕ್ಕೆ ಪೂಜ್ಯರಾಗುತ್ತಾರೆ ಎನ್ನುವುದಕ್ಕೆ ಅಕ್ಕಮಹಾದೇವಿ ನಿದರ್ಶನ ಎಂದರು.

ಅಕ್ಕಮಹಾದೇವಿ ಐಕ್ಯವಾದ ಶ್ರೀಶೈಲದ ಕದಳಿಗೆ ತೆರಳು ಬಹುತೇಕರು ಆಸಕ್ತಿ ತೋರುತ್ತಾರೆ. ಆದರೆ, ಹೋಗಿ ಬರುವುದು ಕಷ್ಟಕರ ಎನಿಸಿದೆ. ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಿದ್ದರೂ ಕದಳಿ ಗುಹೆಗಳಿಗೆ ಹೋಗಿ ಬರುವುದೇ ಸವಾಲಿನ ಕೆಲಸವಾಗಿದೆ. ಆದರೆ, ಯಾವುದೇ ಸೌಲಭ್ಯ ಇಲ್ಲದ ಸಂದರ್ಭದಲ್ಲಿ ಅಕ್ಕಮಹಾದೇವಿ ಅವರು ಗುಹೆಯಲ್ಲಿ ಏಕಾಂಗಿಯಾಗಿ ತಪಸ್ಸು ಮಾಡಿದ್ದು ಗಮನಾರ್ಹ ಸಂಗತಿ ಎಂದರು

ಮನಸ್ಸನ್ನು ಪರಿವರ್ತಿಸುವ ಸಾಮರ್ಥ್ಯ ಭಜನಾ ಕಲೆಗೆ ಇದೆ. ಭಜನೆಯು ಸಂಗೀತ, ಭಕ್ತಿಯ ಸಮ್ಮಿಶ್ರಣವಾಗಿ ಮನುಷ್ಯನ ಉತ್ತುಂಗ ಲೋಕಕ್ಕೆ ಕೊಂಡ್ಯೊಯುವ ಸಾಮರ್ಥ್ಯವಿದೆ. ಇದರಲ್ಲಿ ತೊಡಗಿಕೊಂಡರೆ ಮನುಷ್ಯ ತನ್ನನ್ನು ತಾನು ಮರೆತು ಮನಸ್ಸು ಸಹ ಹಗುರವಾಗುತ್ತದೆ ಎಂದರು.

ದೇವರನ್ನು ಒಲಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ಅದರಲ್ಲಿ ಭಕ್ತಿ ಮಾರ್ಗದಿಂದ ಸುಲಭವಾಗಿ ಭಗವಂತನನ್ನು ಒಲಿಸಿಕೊಳ್ಳಬಹುದು. ಭಕ್ತಿಗೆ ಯಾವುದೇ ಹೊರಗಿನ ಕವಚಗಳು ಬೇಕಿಲ್ಲ. ದೇವರ ಬಳಿ ಭಕ್ತಿಯ ಸಮರ್ಪಣೆ ಮಾಡಿಕೊಳ್ಳುವ ಭಾವ ಇರಬೇಕು ಎಂದರು

ಮನುಷ್ಯ ಸಂಘ ಜೀವಿ. ಮನುಷ್ಯ ಸಮಾಜದ ಋಣವನ್ನು ಪಡೆದು ಬೆಳೆಯುತ್ತಾನೆ. ಹೀಗಾಗಿ ಸಮಾಜದ ಋಣವನ್ನು ತೀರಿಸಲು ಸಾಮಾಜಿಕ ಕೆಲಸಗಳಲ್ಲಿ ತೊಡಗಬೇಕು. ಈ ನಿಟ್ಟಿನಲ್ಲಿ ನಾದ ಹಂಸಿನಿ ಭಜನಾ ಸಂಘ ಸೇವಾ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷ ಶಾರದಾ ಶಿವಲಿಂಗಸ್ವಾಮಿ, ಸಮಾಜ ಸೇವಕರಾದ ಸುಧಾ ಮೃತ್ಯುಂಜಯಪ್ಪ, ನಗರಪಾಲಿಕೆ ಮಾಜಿ ಸದಸ್ಯೆ ಶಾರದಮ್ಮ ಈಶ್ವರ್, ನಾದ ಹಂಸಿನಿ ಭಜನಾ ಸಂಘದ ಅಧ್ಯಕ್ಷೆ ಉಮಾ ಮಹದೇವಸ್ವಾಮಿ ಇನ್ನಿತರರು ಇದ್ದರು.