ಚಿತ್ರದುರ್ಗ: ಐತಿಹಾಸಿಕ ಕೋಟೆನಗರಿಯ ಪ್ರಮುಖ ಶಕ್ತಿದೇವತೆಗಳಾದ, ನವದುರ್ಗೆಯರ ದೊಡ್ಡಕ್ಕ ಏಕನಾಥೇಶ್ವರಿ, ತಂಗಿ ಬರಗೇರಮ್ಮನ ಎತ್ತಿನಗಾಡಿ ರಥೋತ್ಸವ ಮೆರವಣಿಗೆಯೂ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಮೆರವಣಿಗೆ ಅಂಗವಾಗಿ ಪ್ರೀತಿ, ವಾತ್ಸಲ್ಯದ ಸಹೋದರಿಯರಾದ ದೇವಿಯರ ಉತ್ಸವ ಮೂರ್ತಿಗಳನ್ನು ವಿವಿಧ ಬಗೆಯ ಪುಷ್ಪ ಒಳಗೊಂಡು ಅತ್ಯಾಕರ್ಷಕ ವಸ್ತುಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕಾರ ಸೇವೆ ನೆರವೇರಿತು. ನಂತರ ಅಶ್ವವಾಹನರೂಢ ಸುಸಜ್ಜಿತ ಉಚ್ಛಾಯದಲ್ಲಿ ಕಂಗೊಳಿಸುತ್ತಿದ್ದ ದೇವತೆಗಳನ್ನು ಜೋಡೆತ್ತು ಗಾಡಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಏಕನಾಥೇಶ್ವರಿ ದೇವಿಯ ತ್ರಿಶೂಲಾಲಂಕಾರ ಗಮನ ಸೆಳೆಯಿತು.
ಕೋಟೆ ರಸ್ತೆಯ ಪಾದದ ಗುಡಿ ಮುಂಭಾಗದಲ್ಲಿ ಏಕನಾಥೇಶ್ವರಿ ಹಾಗೂ ಬರಗೇರಮ್ಮ ದೇವಿಯ ಮೂಲ ಸನ್ನಿಧಾನದ ಮುಂಭಾಗದಲ್ಲಿ ದೇವಿಯ ಸಿಡಿ ಮಹೋತ್ಸವವೂ ಈ ಬಾರಿ ಶನಿವಾರ (ಏ. 12ರಂದು) ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ. ಈ ಉತ್ಸವದ ಹಿಂದಿನ ದಿನ ಅಂದರೆ ಶುಕ್ರವಾರವೇ ರಾಜಬೀದಿಗಳಲ್ಲಿ ಮೆರವಣಿಗೆ ನಡೆಯುವ ವಾಡಿಕೆ ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು, ಅದರಂತೆ ಈ ಬಾರಿಯೂ ಹಿಂದಿನ ವರ್ಷಕ್ಕಿಂತಲೂ ಕಳೆಗಟ್ಟಿತ್ತು.
ಕಹಳೆ, ಡೊಳ್ಳು, ನಂದಿ ಕೋಲು, ಉರುಮೆ, ತಮಟೆ, ನಗಾರಿ, ಕರಡಿ ಚಮ್ಮಳ, ಗೊಂಬೆ ವೇಷಧಾರಿಗಳನ್ನು ಒಳಗೊಂಡು ವಿವಿಧ ಜನಪದ ಕಲಾತಂಡಗಳೊಂದಿಗೆ ಸಂಚರಿಸಿದ ಮೆರವಣಿಗೆಯಲ್ಲಿ ಅಧಿದೇವತೆ ಏಕನಾಥೇಶ್ವರಿಗೆ ಜೈ, ಬರಗೇರಮ್ಮ ದೇವಿಗೆ ಜೈ, ಉಧೋ ಉಧೋ ಎಂಬ ಹರ್ಷೋದ್ಗಾರ ಮೊಳಗಿದವು. ಭಕ್ತೋತ್ಸಾಹ ಮುಗಿಲುಮುಟ್ಟಿತು. ಸುಡು ಬಿಸಿಲು ಲೆಕ್ಕಿಸದೆ ನೂರಾರು ಯುವಕರು, ಬಾಲಕರು ವಾದ್ಯಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು. ಕೆಲವೆಡೆ ಯುವತಿಯರು ಇದಕ್ಕೆ ಹೊರತಾಗಿರಲಿಲ್ಲ.
ಏಕನಾಥೇಶ್ವರಿ ದೇವಿಯ ಮೆರವಣಿಗೆಯು ಕೋಟೆ ರಸ್ತೆಯಿಂದ ಆರಂಭವಾಗಿ ಆನೆಬಾಗಿಲು, ಬುರುಜನಹಟ್ಟಿ, ಗಾಯತ್ರಿ, ಗಾಂಧಿ, ಎಸ್‌ಬಿಐ ವೃತ್ತ, ಧರ್ಮಶಾಲೆ ರಸ್ತೆ, ದೊಡ್ಡಪೇಟೆ, ಜೋಗಿಮಟ್ಟಿ ರಸ್ತೆ, ಸುಣ್ಣದ ಗುಮ್ಮಿ, ಜಟ್‌ಪಟ್ ನಗರ, ಕರುವಿನಕಟ್ಟೆ ವೃತ್ತ, ಫಿಲ್ಟರ್ ಹೌಸ್ ರಸ್ತೆಯಲ್ಲಿ ಸಂಚರಿಸಿ ರಾತ್ರಿ 10ರಿಂದ 10.30ರೊಳಗೆ ಪಾದದ ಗುಡಿಗೆ ಕರೆತರಲಾಯಿತು.
ಅದೇ ರೀತಿ ಬರಗೇರಮ್ಮ ದೇವಿಯ ಮೆರವಣಿಗೆ ಮೂಲ ದೇಗುಲದಿಂದ ಆರಂಭವಾಗಿ ಹೊಳಲ್ಕೆರೆ ರಸ್ತೆ, ಗೌರಸಂದ್ರ ಮಾರಮ್ಮ ದೇಗುಲ, ಸಂಗೊಳ್ಳಿ ರಾಯಣ್ಣ ವೃತ್ತ, ಬಿ.ಡಿ.ರಸ್ತೆ, ರಂಗಯ್ಯನ ಬಾಗಿಲು, ಉಜ್ಜಯನಿ ಮಠದ ರಸ್ತೆ, ಕೂಡಲೀ ಶೃಂಗೇರಿ ಮಹಾಸಂಸ್ಥಾನ ಶಾಖಾ ಮಠ, ಉಚ್ಚಂಗಿಯಲ್ಲಮ್ಮ ದೇವಿ ದೇಗುಲ, ಚಿಕ್ಕಪೇಟೆ ಸೇರಿ ನಗರದ ರಾಜಬೀದಿಗಳಲ್ಲಿ ಸಂಚರಿಸಿತು.
ವಿಶೇಷಾರತಿ: ಜೋಡೆತ್ತು ರಥ ಸಾಗಿದ ಮಾರ್ಗಗಳಲ್ಲಿ ಭಕ್ತರು ನೀರೆರಚುವ, ಮಹಿಳೆಯರು ಬೃಹದಾಕಾರದ ರಂಗೋಲಿಗಳನ್ನು ಬಿಡಿಸುವ ಮೂಲಕ ಸ್ವಾಗತಿಸಿದರು. ಈ ವೇಳೆ ಎರಡೂ ದೇವತೆಗಳಿಗೆ ಪಾನಕ ಪರಿಹಾರ ಹೆಡೆ ಬಿಡಾರ ಹಿಟ್ಟಿನ ಆರತಿ ಸೇವೆ ನೆರವೇರಿತು. ದೇವಿಗೆ ಆರತಿ ಬೆಳಗಲು ತಟ್ಟೆಗಳನ್ನು ನಾರಿಯರು ವಿಶೇಷವಾಗಿ ಅಲಂಕರಿಸಿದ್ದು, ಕಂಡುಬಂದಿತು.
ಮಹಾಲಕ್ಷ್ಮೀ ರೂಪದಲ್ಲಿ ಬರಗೇರಮ್ಮ: ಬರಗೇರಮ್ಮ ದೇವಿಯ ಅಲಂಕಾರ ಈ ಬಾರಿ ಅತ್ಯಂತ ವಿಶೇಷವಾಗಿತ್ತು. ಎರಡ್ಮೂರು ದಿನಗಳಿಂದಲೂ ದೇಗುಲದಲ್ಲಿ ಇದಕ್ಕಾಗಿ ಭರದ ಸಿದ್ಧತೆಗಳು ನಡೆದವು. ಪುಷ್ಪಗಳಿಂದಲೇ ಎರಡೂ ಬದಿಗಳಲ್ಲಿ ಆನೆ, ನವಿಲು ಮಾದರಿಯೊಂದಿಗೆ ಶಂಖ, ಚಕ್ರ ಸಮೇತ ಮಹಾಲಕ್ಷ್ಮೀ ದೇವಿ ಮಾದರಿಯಲ್ಲಿ ದೇವಿಯೂ ಆಶೀರ್ವದಿಸುವಂತೆ ವೈಭವೋಪೇತವಾಗಿ ಅಲಂಕರಿಸಲಾಗಿತ್ತು. ಕಮಲದ ಹೂವಿನ ಹಾರ ಆಕರ್ಷಿಸಿತು.
ಮೀಸಲು ಸಮರ್ಪಣೆ: ಸೀರೆ, ರವಿಕೆ, ಬಳೆ, ಅಕ್ಕಿ, ಬೇಳೆ, ಬೆಲ್ಲ, ಅರಿಷಿನ, ಕುಂಕುಮ, ಕೊಬ್ಬರಿ, ಎಲೆ, ಅಡಿಕೆ, ಹಣ್ಣು, ಕಾಯಿ ಮಡಿಲಕ್ಕಿಯನ್ನು ದೇವಿಗೆ ಮೀಸಲು ರೂಪದಲ್ಲಿ ನೀಡುವ ಪ್ರತೀತಿ ಇದೆ. ಅದರಂತೆ ಭಕ್ತರು ದೇವತೆಗಳಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸಿದರು. ಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ದಡಾರ, ಸಿಡುಬು ಸೇರಿ ಯಾವುದೇ ರೀತಿಯ ಕಾಯಿಲೆಗಳು ಬರಬಾರದು ಎಂಬ ನಂಬಿಕೆಯೊಂದಿಗೆ ಈ ದೇವತೆಗಳು ಸೇರಿ ಶಕ್ತಿದೇವತೆಗಳಿಗೆ ಮೀಸಲು ಅರ್ಪಿಸುವ ಪದ್ಧತಿಯನ್ನು ಭಕ್ತರು ಪರಂಪರಾನುಗತವಾಗಿ ನಡೆಸಿಕೊಂಡು ಬಂದಿರುವುದು ಇಲ್ಲಿನ ವಿಶೇಷ ಆಚರಣೆಯಾಗಿದೆ.