ಚಾಮರಾಜನಗರ : ಹನೂರು ತಾಲೂಕಿನ ರಾಮಾಪುರ ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕೌಂಟೆಂಟ್ ಚೇತನ್ ಅವರನ್ನು ವರ್ಗಾಯಿಸುವಂತೆ ಮಂಗಳವಾರ ಕಚೇರಿ ಮುಂಭಾಗ ರೈತ ಸಂಘದಿಂದ ಪ್ರತಿಭಟನೆ ನಡೆದರೆ, ಮತ್ತೊಂದೆಡೆ ಕೆಲ ರೈತರು ಅವರನ್ನೇ ಮುಂದುವರಿಸುವಂತೆ ಮನವಿ ಸಲ್ಲಿಸಿದರು.
ಕರ್ನಾಟಕ ರೈತ ಸಂಘ ಹನೂರು ಘಟಕ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪ್ರತಿಭಟನಕಾರರು ಮುಖ್ಯ ರಸ್ತೆಯಲ್ಲಿ ಸಾಗಿ ಅಕೌಂಟೆಂಟ್ ಚೇತನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಪರ್ಕ ಕೇಂದ್ರದ ಮುಂಭಾಗದಲ್ಲಿ ಧರಣಿ ಕುಳಿತರು. ಆದರೆ ಮತ್ತೊಂದೆಡೆ ಕಚೇರಿಯ ಒಳಾಂಗಣದಲ್ಲಿ ಕೆಲ ರೈತ ಮುಖಂಡರು ಚೇತನ್ ಅವರನ್ನೇ ಮುಂದುವರಿಸಬೇಕೆಂದು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಕಾದು ಕುಳಿತಿದ್ದರು.
ರೈತ ಸಂಘದ ಮಾಜಿ ಅಧ್ಯಕ್ಷ ಗೌಡೇಗೌಡ ಮಾತನಾಡಿ, ಹೊರಗುತ್ತಿಗೆ ನೌಕರ ಚೇತನ್ ಅವರು ಈ ಹಿಂದೆ ರಾಮಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಕೃಷಿ ಹೊಂಡ, ಟಾರ್ಪಲಿನ್, ಬಿತ್ತನೆ ಬೀಜ ಹಾಗೂ ಇನ್ನಿತರೆ ಸರ್ಕಾರಿ ಸವಲತ್ತುಗಳನ್ನು ಒದಗಿಸುವಲ್ಲಿ ಅವ್ಯವಹಾರ ನಡೆಸಿದ್ದು, ರೈತರಿಗೆ ಅನ್ಯಾಯವೆಸಗಿದ್ದಾರೆ. ಈ ದಿಸೆಯಲ್ಲಿ ಅವರನ್ನು ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು. ಆದರೆ ಮತ್ತೇ ಈ ಕೇಂದ್ರಕ್ಕೆ ವರ್ಗಾಯಿಸಿರುವುದು ಎಷ್ಟರ ಮಟ್ಟಿಗೆ ಸರಿ? ಇವರು ತಮ್ಮ ಒಳಿತಿಗಾಗಿ ಇನ್ನೊಬ್ಬರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದು, ರೈತರ ನಡುವೆ ಒಡಕುಂಟು ಮಾಡುತ್ತಿದ್ದಾರೆ. ಆದ್ದರಿಂದ ಇವರನ್ನು ಬೇರೆಡೆಗೆ ವರ್ಗಾಯಿಸಬೇಕು. ಇಲ್ಲವೇ ವಜಾಗೊಳಿಸಬೇಕು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕೃಷಿ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್ ಅವರನ್ನು ಪ್ರತಿಭಟನಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ಬಳಿಕ ಸಮಸ್ಯೆಯನ್ನು ಆಲಿಸಿದ ಉಪ ನಿರ್ದೇಶಕರು, ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲು ಎರಡು ದಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.
ಆದರೆ ಇದಕ್ಕೊಪ್ಪದ ಪ್ರತಿಭಟನಕಾರರು ಕೂಡಲೇ ಚೇತನ್‌ರನ್ನು ವರ್ಗಾಯಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಬಳಿಕ ಸ್ಥಳಕ್ಕಾಗಮಿಸಿದ ಸಹಾಯಕ ನಿರ್ದೇಶಕಿ ಸುಂದರಮ್ಮ ಅವರೊಂದಿಗೆ ಚರ್ಚಿಸಿ ಚೇತನ್ ಅವರನ್ನು ಬೇರೆಡೆಗೆ ವರ್ಗಾಯಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜಾದ್‌ಖಾನ್, ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಕಾರ್ಯದರ್ಶಿ ಪೂಂಗೂಡಿ, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಶಿವಮಲ್ಲು, ಕಾರ್ಯದರ್ಶಿ ಗೋಪಾಲ್, ರೈತ ಮುಖಂಡರಾದ ರಾಜೇಂದ್ರ, ಮಾರಿಯಮ್ಮ, ರಾಧ, ರವಿನಾಯ್ಡು, ಸೂರ್ಯ ಹಾಗೂ ಇನ್ನಿತರರು ಇದ್ದರು.
ಮತ್ತೊಂದೆಡೆ ಮನವಿ : ಮತ್ತೊಂದೆಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುತ್ತುರಾಮ, ಗ್ರಾಪಂ ಸದಸ್ಯ ಸೋಮಣ್ಣ, ರೈತ ಮುಖಂಡರಾದ ಪಳನಿಮೇಡಿನ ಜಮಿನಿ, ದಿನ್ನಳ್ಳಿಯ ವೆಂಕಟನಾಯ್ಕ, ಬಸಪ್ಪನದೊಡ್ಡಿಯ ಮಹಮದ್ ರಫಿ ಹಾಗೂ ಇನ್ನಿತರರು ಚೇತನ್ ಅವರನ್ನು ಇಲ್ಲಿಯೇ ಮುಂದುವರಿಸುವಂತೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.