ತಲಕಾಡು ಮಾಧವಮಂತ್ರಿ ನಾಲಾ ಬಯಲಲ್ಲಿ ಸೈಕ್ಲೋನ್ ಮಳೆಯ ಕಾರಣ, ಭತ್ತದ ಬೆಳೆ ಕಟಾವು ನಡೆಸುತ್ತಿದ್ದ ಯಂತ್ರಗಳು ಕೆಲಸವಿಲ್ಲದೆ ನಿಂತಿವೆ.  
ಜಿಲ್ಲೆ

ಅಕಾಲಿಕ ಮಳೆಯಿಂದ ಭತ್ತ ಕಟಾವಿಗೆ ಅಡ್ಡಿ

ತಲಕಾಡು: ಹೋಬಳಿಯಲ್ಲಿ ಚುರುಕಿನಿಂದ ಸಾಗಿದ್ದ ಭತ್ತದ ಕಟಾವಿಗೆ ಅಕಾಲಿಕ ಮಳೆ ತಡೆಯೊಡ್ಡಿದೆ. ಎರಡು ದಿನಗಳಿಂದ ತುಂತುರು ಮಳೆಯಿಂದಾಗಿ ಸೂರ್ಯನ ದರ್ಶನವಾಗದೆ, ಭತ್ತ ಕಟಾವು ಯಂತ್ರಗಳಿಗೆ ಕೆಲಸವಿಲ್ಲದಾಗಿದೆ.

ಹೋಬಳಿಯಲ್ಲಿ ಈ ಬಾರಿಯ ಭತ್ತದ ಇಳುವರಿ ಉತ್ತಮವಾಗಿದೆ. ಆದರೆ ಅಕಾಲಿಕ ಮಳೆಯು ಕಟಾವಿಗೆ ಅಡ್ಡಿಯಾಗಿದೆ. ತಲಕಾಡು, ಬಿ.ಶೆಟ್ಟಹಳ್ಳಿ, ಹೊಳೆಸಾಲು ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿದಂತೆ ಮಳವಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮದವರೆಗೂ ಸುಮಾರು 6000 ಎಕರೆ ಅಚ್ಚುಕಟ್ಟು ವ್ಯಾಪ್ತಿವರೆಗೂ ತಲಕಾಡು ಮಾಧವಮಂತ್ರಿ ನಾಲೆಯ ನೀರು ಪೂರೈಕೆಯಾಗಲಿದೆ. ಅಲ್ಲದೆ ರಾಮಸ್ವಾಮಿ ನಾಲೆಯಿಂದ ರೈತರ ಭೂಮಿಗೆ ನೀರು ಹರಿಯಲಿದೆ. ಉತ್ತಮ ಮಳೆಯಿಂದಾಗಿ ಮಾಧವಮಂತ್ರಿ ಹಾಗೂ ರಾಮಸ್ವಾಮಿ ನಾಲಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನೀರು ಹರಿದಿದ್ದರಿಂದ ಏಕಕಾಲಕ್ಕೆ ಭತ್ತ ಕಟಾವಿಗೆ ಸಿದ್ಧವಾಗಿದೆ.

ಕಬಿನಿ ನಾಲಾ ಅಚ್ಚುಕಟ್ಟು ವ್ಯಾಪ್ತಿಯ ಕಲಿಯೂರು, ಟಿ.ದೊಡ್ಡಪುರ, ಮಾದಾಪುರ ಹಾಗೂ ಹೆಮ್ಮಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭರದಿಂದ ಸಾಗಿದ್ದ ಭತ್ತದ ಕಟಾವು ಮಳೆಯಿಂದ ಸಂಪೂರ್ಣ ಸ್ಥಗಿತಗೊಂಡಿದೆ. ವಾರದ ಹಿಂದೆಯಷ್ಟೇ ಪ್ರಾರಂಭವಾಗಿದ್ದ ಕಟಾವು ಮಳೆ ಅಡ್ಡಿಯಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.