ಸಿದ್ದಾಪುರ: ತಾಲೂಕಿನಲ್ಲಿ ಸೋಮವಾರ ಸುರಿದ ಅಕಾಲಿಕ ಮಳೆಯಿಂದಾಗಿ ಭತ್ತದ ಫಸಲು ಹಾನಿಗೀಡಾಗಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ಭತ್ತ ಕಟಾವು ಮಾಡಿದ ಗದ್ದೆಗಳಲ್ಲಿ ನೀರು ನಿಂತಿದೆ.
ಈಗಾಗಲೇ ತಾಲೂಕಿನಲ್ಲಿ ಶೇ.80ರಷ್ಟು ಭತ್ತದ ಕಟಾವು ಮುಗಿದಿದೆ. ಇನ್ನುಳಿದ ಬೆಳೆಗಳ ಕಟಾವು ಭರದಿಂದ ಸಾಗಿತ್ತು. ಈ ಸಂದರ್ಭದಲ್ಲಿ ಸುರಿದ ಮಳೆಯಿಂದ ಭತ್ತದ ಕಾಳುಗಳು ಉದುರಿ ಹೋಗಿವೆ. ತಾಲೂಕಿನ ಹಾರ್ಸಿಕಟ್ಟಾ, ಬೇಡ್ಕಣಿ, ಅಣಲೇಬೈಲ್, ಬಿದ್ರಕಾನ, ಬಿಳಗಿ, ಇಟಗಿ ಗ್ರಾಪಂ ವ್ಯಾಪ್ತಿಯ ಕೆಲವೆಡೆ ಮಾತ್ರ ಭತ್ತದ ಕಟಾವು ಬಾಕಿ ಉಳಿದಿದ್ದು, ಇನ್ನುಳಿದ ಗ್ರಾಪಂ ವ್ಯಾಪ್ತಿಯಲ್ಲಿ ಭತ್ತದ ಕಟಾವು ಮುಕ್ತಾಯಗೊಂಡಿದೆ.
ತಾಲೂಕಿನಲ್ಲಿ ಈಗಾಗಲೇ ಭತ್ತದ ಕಟಾವು ಮುಕ್ತಾಯ ಹಂತದಲ್ಲಿದ್ದು, ಕೆಲವೆಡೆ ಬಾಕಿ ಇದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು. ರೈತರು ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಮಾಹಿತಿ ನೀಡಬೇಕು. | ಪ್ರಶಾಂತ ಜಿ.ಎಸ್., ಸಹಾಯಕ ಕೃಷಿ ನಿರ್ದೇಶಕ