ಸೋಮವಾರಪೇಟೆ: ಅಕ್ಟೋಬರ್ ತಿಂಗಳಲ್ಲಿ ಅಕಾಲಿಕ ಮಳೆ ಸುರಿಯುತ್ತಿರುವ ಪರಿಣಾಮ ಕಾಫಿ ಫಸಲು ಹಾನಿಯಾಗುತ್ತಿದ್ದು, ಕಾಫಿ ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕಿನಲ್ಲಿ ಕೃಷಿಕರೆ ಕಾಫಿಯನ್ನು ಬೆಳೆಯುತ್ತಿದ್ದು, ಅತಿ ಹೆಚ್ಚು ಅರೇಬಿಕಾ ಕಾಫಿ ಉತ್ಪಾದನೆಯಾಗುತ್ತಿದೆ. ಶೇ. 80 ರಷ್ಟು ಬೆಳೆಗಾರರು ಮುಂಗಾರು ಮತ್ತು ಹಿಂಗಾರು ಮಳೆಯನ್ನೇ ನಂಬಿ ಕಾಫಿ ಕೃಷಿ ಮಾಡುತ್ತಿದ್ದಾರೆ.
ಕಳೆದ ಒಂದು ದಶಕದಿಂದ ಪ್ರತಿವರ್ಷ ಅಕಾಲಿಕ ಮಳೆಯಿಂದ ಕಾಫಿ ಫಸಲು ಹಾನಿಯಾಗುತ್ತಿದೆ. ಪ್ರಸಕ್ತ ಮುಂಗಾರು ಧಾರಾಕಾರ ಸುರಿದ ಪರಿಣಾಮ ಶೇ.60ರಷ್ಟು ಕಾಫಿ ಫಸಲಿಗೆ ಹಾನಿಯಾಗಿದೆ ಎಂದು ಬೆಳೆಗಾರರು ತಿಳಿಸಿದ್ದಾರೆ. ಆದರೆ ಇದುವರೆಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಕಾಫಿ ಮಂಡಳಿ ಮಾಡಿರುವ ಬೆಳೆಹಾನಿ ಸರ್ವೇ ಬೆಳೆಗಾರರಿಗೆ ಪ್ರಯೋಜನವಾಗುತ್ತಿಲ್ಲ ಎಂದು ಬೆಳೆಗಾರರು ದೂರಿದ್ದಾರೆ.
ತಾಲೂಕಿನಲ್ಲಿ 28,590 ಹೆಕ್ಟೇರ್‌ನಲ್ಲಿ ಕಾಫಿ ಉತ್ಪಾದನೆಯಾಗುತ್ತಿದ್ದು, 22,900 ಹೆ.ನಲ್ಲಿ ಅರೇಬಿಕಾ ಕಾಫಿ ಹಾಗೂ 5,690 ಹೆ.ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಉತ್ತಮ ಹವಾಮಾನ, ನಿಗದಿತ ಸಮಯದಲ್ಲಿ ಮಳೆ ಬೀಳುವುದು, ಕಾಫಿ ಫಸಲಿನೊಂದಿಗೆ ಮತ್ತು ಉತ್ತಮ ಬೆಲೆ ಸಿಕ್ಕರೆ ಮಾತ್ರ ಬೆಳೆಗಾರ ಕಾಫಿ ತೋಟ ನಿರ್ವಹಣೆ ಮಾಡಬಹುದು. ಆದರೆ ಪ್ರಸಕ್ತ ವರ್ಷವೂ ಅಕಾಲಿಕ ಮಳೆ ಬೆಳೆಗಾರರ ನೆಮ್ಮದಿ ಕಸಿದುಕೊಂಡಿದೆ.
ನವೆಂಬರ್ ಎರಡನೇ ವಾರದಿಂದ ಡಿಸೆಂಬರ್ ತಿಂಗಳಲ್ಲಿ ಕಾಫಿ ಕೊಯ್ಲಿಗೆ ಬರುವುದು ವಾಡಿಕೆ. ಆದರೆ ಈ ವರ್ಷ ಅಕ್ಟೋಬರ್ ಪ್ರಾರಂಭದಿಂದಲೇ ಅಕಾಲಿಕವಾಗಿ ಕಾಫಿ ಹಣ್ಣಾಗಿದೆ. ಕಳೆದ 20 ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದ ಕಾಫಿ ಹಣ್ಣು ಮಣ್ಣು ಸೇರಿ ಹಾನಿಯಾಗಿದೆ. ಮಳೆ ಬೀಳುತ್ತಿರುವ ಸಂದರ್ಭದಲ್ಲೇ ಕಾಫಿ ಕೊಯ್ಲು ಮಾಡಿದವರು ಕಾಫಿ ಒಣಗಿಸಲು ಸಮಸ್ಯೆಯಾಗಿ, ಕಾಫಿ ಗುಣಮಟ್ಟವನ್ನು ಕಳೆದು ಸೂಕ್ತ ಬೆಲೆ ಸಿಗದಂತಾಗಿದೆ.
ಕಾಫಿ ಹಣ್ಣಾಗಿ ಏಳೆಂಟು ದಿನಗಳಲ್ಲೇ ಕೊಯ್ಲು ಮಾಡಬೇಕು. ಇಲ್ಲದಿದ್ದಲ್ಲಿ ಗಿಡದಲ್ಲೇ ಹಣ್ಣು ಒಣಗುತ್ತದೆ. ಅಕಾಲಿಕ ಮಳೆಬಿದ್ದರೆ ಉದುರಿ ಮಣ್ಣು ಸೇರುತ್ತದೆ. ಕಾಫಿ ಹಣ್ಣು ಒಣಗಿದರೆ ಪಲ್ಪಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಹಣ್ಣಾದ ಸಂದರ್ಭದಲ್ಲಿ ಕೊಯ್ಲು ಮಾಡಿ 24 ಗಂಟೆಗಳೊಳಗೆ ಪಲ್ಪಿಂಗ್ ಮಾಡಿಸಿ, ಒಣಗಿಸಿದರೆ ಮಾತ್ರ ಗುಣಮಟ್ಟ ಮತ್ತು ಉತ್ತಮ ಇಳುವರಿ ಸಿಗುತ್ತದೆ ಅಲ್ಲದೆ ಉತ್ತಮ ಬೆಲೆಯನ್ನು ನಿರೀಕ್ಷೆ ಮಾಡಬಹುದು.
ಶಾಂತಳ್ಳಿ ಹೋಬಳಿಯಲ್ಲಿ ಅಕಾಲಿಕ ಮಳೆಯಿಂದ ಕಾಫಿ ಫಸಲಿಗೆ ದೊಡ್ಡ ಮಟ್ಟದ ಹಾನಿಯಾಗಿದೆ. ಮೂವತ್ತೊಕ್ಲು, ಗರ್ವಾಲೆ, ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂಬಾರಗಡಿಗೆ, ಮಂಕ್ಯಾ, ಹರಗ ಇತ್ಯಾದಿ ಗ್ರಾಮಗಳಲ್ಲಿ ಕೊಳೆರೋಗದಿಂದ ಫಸಲು ಹಾನಿಯಾಗಿದ್ದು, ಬಹುತೇಕ ತೋಟಗಳಲ್ಲಿ ಕೇವಲ ಶೇ.20 ಕಾಫಿ ಫಸಲು ಉಳಿದಿದೆ ಎಂದು ಬೆಳೆಗಾರರು ತಿಳಿಸಿದ್ದಾರೆ.
ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಹೋಬಳಿಗಳಲ್ಲಿ ಶೇ.40 ಅರೇಬಿಕಾ ಕಾಫಿ ಗಿಡದಲ್ಲಿ ಉಳಿದಿದೆ. ಆದರೆ ಇದುವರೆಗೂ ಬೆಳೆಹಾನಿ ಪರಿಹಾರ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅಕಾಲಿಕ ಮಳೆ ಮುಂದುವರಿದರೆ, ಸಂಪೂರ್ಣ ಫಸಲು ಮಣ್ಣು ಪಾಲಾಗಲಿದೆ ಎಂದು ಬೆಳೆಗಾರರು ಹೇಳಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ(ಎನ್‌ಡಿಆರ್‌ಎಫ್) ಮಾನದಂಡದಂತೆ ಒಂದು ಹೆಕ್ಟೇರ್‌ನಲ್ಲಿ ಶೇ.33ಕ್ಕಿಂತ ಅಧಿಕ ನಷ್ಟ ಸಂಭವಿಸಿದ್ದರೆ ಪರಿಹಾರ ಸಿಗುತ್ತದೆ. ಆದರೆ ಶೇ.60ರಷ್ಟು ಕಾಫಿ ಫಸಲು ಹಾನಿಯಾದರೂ ಪರಿಹಾರ ಸಿಗುತ್ತಿಲ್ಲ ಎಂಬುದು ಬೆಳೆಗಾರರ ಆರೋಪವಾಗಿದೆ.