ಜಿಲ್ಲೆ

ಅಕಾಲಿಕ ಮಳೆಗೆ ರೈತರು ಕಂಗಾಲು

ನರೇಗಲ್ಲ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಭಾನುವಾರ ಸಂಜೆ ಸುರಿದ ಮಳೆ ರೈತರನ್ನು ಕಂಗಾಲಾಗುವಂತೆ ಮಾಡಿದೆ.

ಪಟ್ಟಣ, ಅಬ್ಬಿಗೇರಿ, ಡ.ಸ. ಹಡಗಲಿ, ಯರೇಬೇಲೇರಿ, ಗುಜಮಾಗಡಿ, ಕುರಡಗಿ, ಜಕ್ಕಲಿ, ಕೋಚಲಾಪೂರ, ಬೂದಿಹಾಳ, ಮಾರನಬಸರಿ, ಹಾಲಕೆರೆ, ನಿಡಗುಂದಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಮಳೆಯಾಗಿದೆ. ಸಂಜೆ 7.30ಕ್ಕೆ ಪ್ರಾರಂಭವಾದ ಗಾಳಿಯೊಂದಿಗೆ ಮಳೆ ಸುಮಾರು ಒಂದು ಗಂಟೆಗಳ ಕಾಲು ಸುರಿಯಿತು. ಏಕಾಏಕಿ ಸುರಿದ ಮಳೆಯಿಂದ ಬೆಳೆ ರಕ್ಷಿಸಲು ರೈತರು ಪರದಾಡುವಂತಾಯಿತು.

ಹಿಂಗಾರು ಪ್ರಮುಖ ಬೆಳೆಯಾದ ಕಡಲೆ ಉತ್ತಮ ಇಳುವರಿ ಬಂದಿದೆ ಆದರೆ, ಅಕಾಲಿಕ ಮಳೆ ಅನ್ನದಾತನನ್ನು ಸಂಕಷ್ಟಕ್ಕೆ ದೂಡಿದೆ. ಪಟ್ಟಣದ ಹೊರ ವಲಯದ ಗದಗ ರಸ್ತೆ, ವೀರಪ್ಪಜ್ಜನ ಮಠದ ರಸ್ತೆ, ಗಜೇಂದ್ರಗಡ ರಸ್ತೆ, ಹಂಚಿನಾಳ ರಸ್ತೆ, ಸ್ಯಾಂಪೂರ ರಸ್ತೆ ಸೇರಿ ಸುತ್ತಲಿನ ಭಾಗದಲ್ಲಿ ಒಕ್ಕಣೆ ಮಾಡಲು ಸಂಗ್ರಹಿಸಿದ್ದ ಕಡಲೆ, ಗೋಧಿ, ಜೋಳದ ಬೆಳೆಗಳನ್ನು ರಕ್ಷಿಸಲು ರೈತರು ಪರದಾಡುತ್ತಿರುವ ದೃಶ್ಯ ಕಂಡು ಬಂದಿತು. ಕಟಾವು ಮಾಡಿದ್ದ ಬೆಳೆ, ರಾಶಿ ಮಾಡಲಾಗಿದ್ದ ಕಾಳುಗಳು, ಜಾನುವಾರುಗಳ ಮೇವು ರಕ್ಷಿಸಲು ತಾಡಪಾತ್ರಿಗಳನ್ನು ಮುಚ್ಚುವಲ್ಲಿ ರೈತರು ನಿರತರಾಗಿದ್ದರು.

ಮುಂಡರಗಿ ವರದಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಫಸಲಿಗೆ ಬಂದಿದ್ದ ಹಿಂಗಾರು ಬೆಳೆಗಳಾದ ಜೋಳ, ಕಡಲೆ, ಗೋಧಿ ಮೊದಲಾದ ಬೆಳೆಗಳಿಗೆ ಹಾನಿಯಾಗುವ ಸಂಭವವಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ತಾಲೂಕಿನ ವಿವಿಧ ಕಡೆಗಳಲ್ಲಿ ಅಕಾಲಿಕ ಮಳೆ ಸುರಿದಿದೆ. ತಾಲೂಕಿನಲ್ಲಿ 14,922 ಹೆಕ್ಟೇರ್ ಜೋಳ, 1,316 ಹೆಕ್ಟೇರ್ ಗೋಧಿ, 11,816 ಹೆಕ್ಟೇರ್ ಕಡಲೆ ಬಿತ್ತನೆಯಾಗಿತ್ತು. ಶೇ.70ರಷ್ಟು ಬೆಳೆ ಕಟಾವು ಮಾಡಲಾಗಿದೆ. ಕಟಾವು ಮಾಡದ ಇನ್ನುಳಿದ ಬೆಳೆಗಳಿಗೆ ಮಳೆಯಿಂದ ಹಾನಿ ಆಗುವ ಸಂಭವವಿದೆ ಎನ್ನುತ್ತಾರೆ ರೈತರು.

ಮಳೆಯಿಂದಾಗಿ ಜೋಳ ಕಪ್ಪಾಗುವ ಸಂಭವವಿದೆ. ಅಕಾಲಿಕ ಮಳೆಯಿಂದ ಉತ್ತಮವಾಗಿ ಬಂದಿರುವ ಬೆಳೆಯೂ ಹಾನಿಗೀಡಾಗುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ವೆಂಕಟಾಪುರ ಗ್ರಾಮದ ರೈತ ಚನ್ನಬಸಪ್ಪ ಹಳ್ಳಿ.