ಜಿಲ್ಲೆ

ಅಂಬೇಡ್ಕರ್ ಹೋರಾಟ ವಕೀಲರಿಗೆ ಮಾದರಿ

ಚಿತ್ರದುರ್ಗ: ದೇಶಕ್ಕೆ ಸುಭದ್ರ ಸಂವಿಧಾನ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನವೇ ದೊಡ್ಡ ಹೋರಾಟವಾಗಿತ್ತು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರೋಣ ವಾಸುದೇವ ಹೇಳಿದರು.

ನಗರದ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 134ನೇ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಅಪಾರ ವಿದ್ವತ್ತನ್ನು ಹೊಂದಿದ್ದ ಅಂಬೇಡ್ಕರ್ ಅವರ ಜೀವನ ಹೇಗೆ ಹೋರಾಟದಿಂದ ಕೂಡಿತ್ತೋ ಅದೇ ರೀತಿ ವಕೀಲರ ಜೀವನವೂ ಒಂದು ಹೋರಾಟವಾಗಿರುತ್ತದೆ ಎಂದರು.

ವಕೀಲರ ವೃತ್ತಿ ಎಂದರೆ ಕಕ್ಷಿದಾರರಿಗೆ ನ್ಯಾಯಕೊಡಿಸಲು ಹೋರಾಡುವುದಾಗಿದೆ. ಜ್ಞಾನವೇ ಬಂಡವಾಳವಾಗಬೇಕು. ಈ ಹೋರಾಟಕ್ಕೆ ಅಂಬೇಡ್ಕರ್ ಮಾದರಿಯಾಗಿರಬೇಕು. ಸಂವಿಧಾನ ಸುಭದ್ರವಾಗಿರುವುದರಿಂದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ಪರಸ್ಪರ ಕಾರ್ಯ ವ್ಯಾಪ್ತಿ ವಿಸ್ತರಣೆಗೆ ಅವಕಾಶವಿಲ್ಲ ಎಂದು ತಿಳಿಸಿದರು.

ಬೇರೆ ದೇಶಗಳಲ್ಲಿ ಭದ್ರ ಸಂವಿಧಾನವಿಲ್ಲದ ಕಾರಣ ಪ್ರಧಾನಿಯನ್ನು ಅಧಿಕಾರದಿಂದ ಯಾವಾಗ ಬೇಕಾದರೂ ಓಡಿಸುತ್ತಾರೆ. ರಾಷ್ಟ್ರಪತಿಯನ್ನು ಇಳಿಸಿ ಸೇನೆ ಆಡಳಿತ ನಡೆಸುವಂಥ ಅರಾಜಕತೆಯನ್ನು ನೋಡುತ್ತಿದ್ದೇವೆ. ಪ್ರಜಾಪ್ರಭುತ್ವಕ್ಕೆ ಸುಭದ್ರ ಸಂವಿಧಾನ ಇರಬೇಕು. ಅಂಬೇಡ್ಕರ್ ರಚಿಸಿರುವ, ನಮ್ಮ ದೇಶದ ಸಂವಿಧಾನಕ್ಕೆ ನಾವೆಲ್ಲರೂ ವಿಧೇಯರಾಗಿ ಸೇವೆ ಸಲ್ಲಿಸಬೇಕಿದೆ ಎಂದರು.

ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕಣಿ ಮಾತನಾಡಿ, ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಬಾಲ್ಯದಲ್ಲಿ ಅವರು ಅನೇಕ ಕಷ್ಟ, ಅವಮಾನ, ಹಿಂಸೆಗಳನ್ನು ಅನುಭವಿಸಿದ್ದರಿಂದಲೇ ದೇಶಕ್ಕೆ ಅತ್ಯುತ್ತಮ ಸಂವಿಧಾನ ಕೊಡಲು ಸಾಧ್ಯವಾಯಿತು. ಶಿಕ್ಷಣ, ಸಂಘಟನೆ, ಹೋರಾಟ ಅವರ ಮೂಲ ಮಂತ್ರವಾಗಿತ್ತು ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ವಕೀಲರು ಹೋರಾಟದ ವಿವಿಧ ಮಜಲುಗಳನ್ನು ಅಂಬೇಡ್ಕರ್ ಅವರಿಂದ ಕಲಿಯಬೇಕು ಎಂದರು. ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಇಡೀ ಜಗತ್ತು ಭಾರತದ ಸಂವಿಧಾನದೆಡೆ ನೋಡುತ್ತಿದೆ. ಭದ್ರ ಸಂವಿಧಾನವಿದ್ದರೂ ದೇಶದಲ್ಲಿ ಭಯದ ವಾತಾವರಣವಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲ ಬಿಸ್ನಳ್ಳಿ ಜಯಣ್ಣ, ವಿಶ್ವ ಸಂಸ್ಥೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗಿದೆ ಎಂದರು.

ನ್ಯಾಯಾಧೀಶ ಸಿ.ಎಚ್.ಗಂಗಾಧರ್, ಡಿ.ಮಮತಾ, ಎಂ.ವಿಜಯ್, ಚೈತ್ರಾ, ಉಜ್ವಲಾ ವೀರಣ್ಣ, ರಶ್ಮಿ ಎಸ್.ಮರಡಿ, ಅನಿತಾಕುಮಾರಿ, ಆರ್.ಸಹನಾ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪ್ರಧಾನ ಕಾರ‌್ಯದರ್ಶಿ ಗಂಗಾಧರ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಕೆ.ರಹಮತ್‌ವುಲ್ಲಾ, ವಿಜಯಕುಮಾರ್, ಎಸ್.ಬಿ.ವಿಶ್ವನಾಥ್ ಇತರರಿದ್ದರು.

ವಿಜಯಕುಮಾರ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಕೀಲ ಎಂ.ಕೆ.ಲೋಕೇಶ್ ಸ್ವಾಗತಿಸಿದರೆ, ವಕೀಲರ ಸಂಘದ ಸಹ ಕಾರ‌್ಯದರ್ಶಿ ಗಿರೀಶ್ ಬಿ.ಮಲ್ಲಾಪುರ ವಂದಿಸಿದರು. ವಕೀಲ ಟಿ.ಹನುಮಂತಪ್ಪ ನಿರೂಪಿಸಿದರು.