ಜಿಲ್ಲೆ

ಅಂಬೇಡ್ಕರ್ ಸೇವಾ ಸಮಿತಿಯಿಂದ ಜಾತಿಗಣತಿ ಅಭಿಯಾನ

ಯಳಂದೂರು: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಸಮೀಕ್ಷೆಯನ್ನು ಹಮ್ಮಿಕೊಂಡಿದ್ದು, ಈ ಗಣತಿ ಪ್ರತಿ ಕಡೆಯೂ ನಡೆಯುತ್ತಿದೆ ಎಂದು ಸೇವಾ ಸಮಿತಿಯ ಕೆಸ್ತೂರು ಸಿದ್ದರಾಜು ಹೇಳಿದರು.

ತಾಲೂಕು ಅಂಬೇಡ್ಕರ್ ಸೇವಾ ಸಮಿತಿಯಿಂದ ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಾತಿ ಜನಗಣತಿ ಜಾಗೃತಿ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ನಮ್ಮ ತಾಲೂಕಿನಲ್ಲಿ ಶೇ.100ರಷ್ಟು ಗಣತಿಯನ್ನು ಮಾಡುವ ನಿಟ್ಟಿನಲ್ಲಿ ನಮ್ಮ ಸಮಿತಿಯಿಂದ ಪಟ್ಟಣವೂ ಸೇರಿದಂತೆ ತಾಲೂಕಿನ ಪ್ರತಿ ಗ್ರಾಮಕ್ಕೂ ತೆರಳಿ ನಮ್ಮ ಸಮಿತಿಯಿಂದ ಜಾತಿಗಣತಿಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಾತಿ ಗಣತಿಯಿಂದ ನಮಗೆ ಆಗುವ ಲಾಭಗಳೇನು, ಸರ್ಕಾರದಿಂದ ನಮಗೆ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಇದು ಎಷ್ಟು ಅಗತ್ಯ, ಇದರಿಂದ ಯಾವ ರೀತಿಯ ಅನುಕೂಲವಾಗಲಿದೆ ಎಂಬುದರ ಬಗ್ಗೆ ಪ್ರತಿ ಮನೆಮನೆಗೂ ತೆರಳಿ ನಾವು ಜಾಗೃತಿ ಮೂಡಿಸುತ್ತಿದ್ದೇವೆ. ಕೆಲವು ಪರಿಶಿಷ್ಟ ಜಾತಿಯವರ ರೇಷನ್ ಕಾರ್ಡ್‌ಗಳಲ್ಲಿ ಪರಿಶಿಷ್ಟ ಪಂಗಡ ಎಂದು ನಮೂದಾಗಿದೆ. ಇಂತಹ ಹತ್ತು ಹಲವು ಸಮಸ್ಯೆಗಳಿವೆ. ಹಾಗಾಗಿ, ಇದನ್ನು ಸರಿಪಡಿಸಿಕೊಳ್ಳಲು ಜಾತಿಗಣತಿ ಹೆಚ್ಚು ಮಹತ್ವವಾಗುತ್ತದೆ ಎಂಬುದರ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಬಲಗೈ ಸಮುದಾಯ ಹೊಲೆಯ ಎಂದೇ ನಮೂದಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ನಮ್ಮ ತಂಡದ ಎಲ್ಲ ಸದಸ್ಯರೂ ಮೇ. 25ರವರೆಗೂ ಎಲ್ಲ ಗ್ರಾಮಗಳಿಗೂ ತೆರಳಿ ಈ ಬಗ್ಗೆ ಜಾಗೃತಿ ಮೂಡಿಸಲಿದ್ದೇವೆ. ಅಲ್ಲದೆ ಆಟೋಗಳಲ್ಲಿ ಮೈಕ್‌ಗಳ ಮೂಲಕವೂ ಜಾತಿ ಗಣತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಯರಿಯೂರು ಸಿ. ರಾಜಣ್ಣ, ಗುಂಬಳ್ಳಿ ಮಹಾದೇವಯ್ಯ, ಅಗರ ಲಿಂಗರಾಜು, ಜಯರಾಮು, ಕೆಸ್ತೂರು ರಾಜು, ಅಗ್ರಹಾರ ರೇವಣ್ಣ, ಲಿಂಗರಾಜಮೂರ್ತಿ, ದುಗ್ಗಹಟ್ಟಿ ಮಾದೇಶ್, ಮದ್ದೂರು ಉಮಾಶಂಕರ್, ವೈ.ಕೆ. ಮೋಳೆ ನಂಜುಂಡ, ಯರಿಯೂರು ನಾಗೇಂದ್ರ, ಯರಗಂಬಳ್ಳಿ ಮಲ್ಲು ಬಿಇಒ ಮರಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಸೇರಿದಂತೆ ಅನೇಕರು ಇದ್ದರು.