ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಬಳಿ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದಿಂದ ನಡೆದಿರುವ ಧರಣಿಯಲ್ಲಿ ಪ್ರದೀಪ ಚಲವಾದಿ, ಪ್ರತಾಪ ಚಿಕ್ಕಲಕಿ, ರಾಜು ವಾಲೀಕಾರ ಮತ್ತಿತರರಿದ್ದಾರೆ.
- ವಿಜಯಪುರ:ನಗರದ ಮನಗೂಳಿ ಅಗಸಿ ಬಳಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶನಿವಾರ 12 ನೇ ದಿನಕ್ಕೆ ಕಾಲಿರಿಸಿತು.
ದಲಿತ ಮುಖಂಡ ಬಸವರಾಜ ಕುಬಕಡ್ಡಿ ಮಾತನಾಡಿ, ಕಳೆದ ಕೆಲ ದಿನಗಳಿಂದ ಅಂಬೇಡ್ಕರ್ ಭವನಕ್ಕಾಗಿ ನಡೆಸುತ್ತಿರುವ ಧರಣಿ ನಿರತರನ್ನು ಜಿಲ್ಲಾಧಿಕಾರಿಗಳು ಭೇಟಿ ಮಾಡಿ ನಮ್ಮ ಸಮಸ್ಯೆ ಆಲಿಸಿದ್ದು, ನಮಗೆ ನ್ಯಾಯ ಸಿಗುವ ಆಶಾ ಭಾವನೆ ಮೂಡಿದೆ. ಮನಗೂಳಿ ಅಗಸಿ ಬಳಿ ವಾಸಿಸುವ ದಲಿತರು ಯಾವುದೇ ಶುಭ ಕಾರ್ಯ ಮಾಡಬೇಕಾದರೆ ಸಮುದಾಯ ಭವನ ಇಲ್ಲದೆ ಪರಿತಪಿಸುವ ವಾತಾವರಣವಿದ್ದು, ತ್ವರಿತವಾಗಿ ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
- ಅಲ್ಲದೆ, ಸೂಕ್ತ ಜಾಗ ಮಂಜೂರು ಮಾಡುವ ಮೂಲಕ ಶಾಶ್ವತ ಪರಿಹಾರ ಒದಗಿಸುವವರೆಗೆ ಧರಣಿ ಸತ್ಯಾಗ್ರಹ ಮುಂದುವರಿಯುತ್ತದೆ ಎಂದು ಹೇಳಿದರು.
- ಮುಖಂಡ ಬಸವಕುಮಾರ ಕಾಂಬಳೆ ಮಾತನಾಡಿ, ನಮ್ಮ ಹೋರಾಟಕ್ಕೆ ಸ್ಪಂದಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚುವರಿ ಜಾಗ ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಕೂಡಲೇ ಉತಾರ ಮಾಡಿ ಕೊಡುವ ಮೂಲಕ ಸಮಸ್ಯೆ ಸುಖಾಂತ್ಯಗೊಳಿಸಬೇಕೆಂದು ಆಗ್ರಹಿಸಿದರು.
ಪ್ರದೀಪ ಚಲವಾದಿ, ಪ್ರತಾಪ ಚಿಕ್ಕಲಕಿ, ರಾಜು ವಾಲೀಕಾರ, ರೋಹಿತ ಮಲಕಣ್ಣವರ, ಕೀರ್ತಿ ಕಾಖಂಡಕಿ, ರಾಜರತನ ಕಾಂಬಳೆ, ಶಿವರಾಜ ಕೂಡಗಿ, ಬಾಬು ಶಿವಶರಣ, ಸಾಗರ ಕಾಖಂಡಕಿ, ವಿಶಾಲ ಮಲಕಣ್ಣವರ, ಕೀರ್ತಿಕುಮಾರ ಕಾಖಂಡಕಿ, ಅಜಯ ಕಾಖಂಡಕಿ, ಆಶಾ ಮಾನೆ, ಅಶ್ವಿನಿ ಕುಬಕಡ್ಡಿ, ಮಧು ಕಾಖಂಡಕಿ, ಮೀನಾಕ್ಷಿ ಕಾಖಂಡಕಿ, ಶೋಭಾ ಜವಳಿ ಮತ್ತಿತರರಿದ್ದರು.