ಬಾಗೇಪಲ್ಲಿ : ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಮತ್ತು ತಾಲೂಕು ಆಡಳಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಅರೆಬೆತ್ತಲೆ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಗೂಳೂರು ವೃತ್ತದಲ್ಲಿ ಜಮಾವಣೆಯಾದ ತಾಲೂಕಿನ 24 ದಲಿತ ಸಂಘಟನೆಗಳ ನೂರಾರು ಕಾರ್ಯಕರ್ತರು, ಪ್ರಮುಖ ರಸ್ತೆಗಳಲ್ಲಿ ಅರಬೆತ್ತಲೆ ಮೆರವಣಿಗೆ ನಡೆಸಿದರು. ನಂತರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ತಾಪಂ ಆವರಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸ್ಥಳ ಗುರುತಿಸಿ, ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಮೂರು ವರ್ಷಗಳಾದರೂ ಇಂದಿಗೂ ಭವನ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಹೆಣ್ಣೂರು ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ಭವನ ನಿರ್ಮಾಣದ ಕುರಿತು ಪ್ರಶ್ನಿಸುವ ಸಂಘಟನೆಗಳಲ್ಲಿಯೇ ಕೆಲವರು ಗುಂಪುಗಾರಿಕೆ ಸೃಷ್ಟಿಸುತ್ತಿದ್ದಾರೆ, ಭವನಕ್ಕೆ ಅಡ್ಡಿಪಡಿಸಿದರೆ ಶಾಸಕ ಸ್ಥಾನ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಎಚ್ಚರಿಸಿದರು.
ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಬೇಕೆಂದು ಪಟ್ಟು ಹಿಡಿದಿರುವ ಶಾಸಕರಿಗೆ ಅಧಿಕಾರದ ಅಹಂ ನೆತ್ತಿಗೇರಿದೆ ಎಂದು ರಾಜ್ಯ ಸಮತಾ ಸೈನಿಕದಳ ಅಧ್ಯಕ್ಷ ಡಾ.ವೆಂಕಟಸ್ವಾಮಿ ಕಿಡಿಕಾರಿದರು.
ಜಿಪಂ ಮಾಜಿ ಉಪಾಧ್ಯಕ್ಷ ಎ.ವಿ.ಪೂಜಪ್ಪ, ಮುಖಂಡರಾದ ಎಂ.ಜಿ.ಕಿರಣ್‌ಕುಮಾರ್, ಕಡ್ಡೀಲು ವೆಂಕಟರವಣ, ಜಿ.ಎನ್.ಅಂಜಿನಪ್ಪ, ಪಿ.ಡಿ.ವೆಂಕಟರವಣ, ಶ್ರೀನಿವಾಸ್, ಟಿ.ರಾಮಪ್ಪ, ಕೆ.ವಿ.ರಮೇಶ್, ನಾಗಪ್ಪ, ಎನ್.ನಾರಾಯಣಸ್ವಾಮಿ, ಜೀವಿಕ ನಾರಾಯಣಸ್ವಾಮಿ, ಗಂಗಪ್ಪ, ವೆಂಕಟರವಣ, ರಾಜಪ್ಪ, ಡಿ.ವಿ.ಅಂಜಿನಪ್ಪ, ಗಂಗಾಧರ್, ಗಣೇಶ್, ಅಪ್ಪಣ್ಣ, ಸಾಯಿ, ಟಿ.ವೆಂಕಟೇಶ್ ಇತರರಿದ್ದರು.