ಜಿಲ್ಲೆ

ಅಂಬೇಡ್ಕರ್ ಭವನ ವೀಕ್ಷಿಸಿದ ಎಚ್ಡಿಕೆ : ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಆಕ್ರೋಶ

ಚನ್ನಪಟ್ಟಣ: ಕಳಪೆ ಕಾಮಗಾರಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ಭವನವನ್ನು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮಂಗಳವಾರ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಭವನವನ್ನು 15 ವರ್ಷಗಳ ಬಳಿಕ ಉದ್ಘಾಟನೆ ಮಾಡಿದ್ದೇವೆ. ಉದ್ಘಾಟನೆಯಾದ ಬಳಿಕ ಕಳಪೆ ಕಾಮಗಾರಿ ಬಗ್ಗೆ ಈಗ ದೂರುಗಳು ಬರುತ್ತಿವೆ. ಇದಕ್ಕೆ ನಾನು ಹೊಣೆಗಾರ ಅಲ್ಲ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೂ ಸರಿಯಾಗಿ ಕೆಲಸ ಮಾಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸಚಿವರ ಜತೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ಅವೈಜ್ಞಾನಿಕ ಕಾಮಗಾರಿಯಿಂದ ಭವನದ ಕೆಳಭಾಗದಲ್ಲಿ ನೀರು ನಿಲ್ಲುತ್ತಿದೆ. ಸೋರಿಕೆ ನೀರು ತಡೆಯಲು ಸಾಧ್ಯವಾಗದೇ ಸಮಸ್ಯೆ ಉಂಟಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಸುಸಜ್ಜಿತ ಕಾಮಗಾರಿ ನಡೆಸಲು ಸೂಚಿಸಲಾಗುವುದು ಎಂದರು.

ತಹಸೀಲ್ದಾರ್ ಎಲ್.ನಾಗೇಶ್, ಪೌರಾಯುಕ್ತ ಶಿವನಂಕರಿಗೌಡ, ಸಮಾಜ ಕಲ್ಯಾಣಾಧಿಕಾರಿ ಸರೋಜಮ್ಮ, ನಗರಸಭೆ ಇಂಜಿನಿಯರ್ ಲೋಹಿತ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಅಧಿಕಾರಿಗಳಿಗೆ ತರಾಟೆ: ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಭವನದ ಕಾಮಗಾರಿಗೆ ದುಸ್ಥಿತಿ ಬಂದಿದೆ. ಇರುವ ಅನುದಾನವನ್ನು ಬಳಸಿಕೊಂಡು ಭವನ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ, ಸಮಾಜ ಕಲ್ಯಾಣಾಧಿಕಾರಿಗಳು ಭವನ ಉದ್ಘಾಟನೆಯಾದ ಬಳಿಕ ಒಮ್ಮೆಯೂ ಭವನಕ್ಕೆ ಆಗಮಿಸಿ ವೀಕ್ಷಣೆ ಮಾಡಿಲ್ಲ ಎಂದು ಆರೋಪಿಸಿದ ಕುಮಾರಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಹಾಗೂ ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡು, ನಿಮಗೆ ಭವನದ ಬಗ್ಗೆ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಇದ್ದರೆ ಹುದ್ದೆ ಬಿಟ್ಟು ಹೋಗಿ ಎಂದು ಕಿಡಿ ಕಾರಿ, ಸ್ಥಳದಲ್ಲಿಯೇ ಹಿರಿಯ ಅಧಿಕಾರಿಗಳ ಜತೆಗೆ ದೂರವಾಣಿ ಮೂಲಕ ಚರ್ಚೆ ನಡೆಸಿದರು.

ತಾಲೂಕಿನ ಕೆಲವು ಇಲಾಖೆಗಳಲ್ಲಿ ಏನೂ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಕೆಲವು ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇಲ್ಲಿ ಕೆಲ ಅಧಿಕಾರಿಗಳು ಕೆಲವರಿಗೆ ಪಗಾರ ಕೊಟ್ಟು ಬಂದಿರುತ್ತಾರೆ. ಕ್ಷೇತ್ರದಲ್ಲಿ ಬಿಜೆಪಿ ಬೆಳೆಸಬೇಕೆಂದು ಕೆಲವರು ಇದ್ದಾರೆ, ಈಗ ಆ ಅಧಿಕಾರಿಗಳು ಅವರ ಕಂಟ್ರೋಲ್‌ಗೂ ಸಿಗುತ್ತಿಲ್ಲ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹೆಸರು ಬಳಸದೇ ಕುಮಾರಸ್ವಾಮಿ ಟಾಂಗ್ ನೀಡಿದರು.