ಜಿಲ್ಲೆ

ಅಂಬೇಡ್ಕರ್ ಭವನ ಕಾಮಗಾರಿ ತ್ವರಿತಗೊಳಿಸಲು ಕ್ರಮ

ಮೈಸೂರು: ನನೆಗುದಿಗೆ ಬಿದ್ದಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಬಾಕಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ.ರಾಕೇಶ್‌ಕುಮಾರ್ ತಿಳಿಸಿದರು.

ನಗರದ ದೇವರಾಜ ಮೊಹಲ್ಲಾದಲ್ಲಿ ನಿರ್ಮಿಸುತ್ತಿರುವ ಡಾ.ಅಂಬೇಡ್ಕರ್ ಭವನಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಬೇಡ್ಕರ್ ಭವನದ ಬಾಕಿ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರು ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಕಟ್ಟಡದ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಮಾಹಿತಿ ಪಡೆಯಲಾಗಿದೆ. ಹೆಚ್ಚುವರಿ ಕಾಮಗಾರಿ ಪೂರ್ಣಗೊಳಿಸಲು ಅಂದಾಜು ಪಟ್ಟಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಸಮರ್ಪಿಸಲಾಗುವುದು ಎಂದು ತಿಳಿಸಿದರು.

ಅಂಬೇಡ್ಕರ್ ಭವನದ ಬಾಕಿ ಕಾಮಗಾರಿಯನ್ನು ಮುಡಾ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಅನುದಾನದ ಹಂಚಿಕೆ ಪದ್ಧತಿಯಲ್ಲಿ ಪೂರ್ಣಗೊಳಿಸಲು ಸಚಿವರು ಸಲಹೆ ನೀಡಿದ್ದಾರೆ ಎಂದರು. ಅವಶ್ಯಕತೆಯಿರುವ ಕಾಮಗಾರಿಯನ್ನು ಮುಗಿಸಲು ಆದ್ಯತೆ ನೀಡಲಾಗುವುದು. ಅನವಶ್ಯಕವಾದ ಕಾಮಗಾರಿ ಕೈಬಿಟ್ಟು, ಅಗತ್ಯವಿರುವ ಕಾಮಗಾರಿಯನ್ನು ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಇನ್ನೂ ಏನೇನು ಕಾಮಗಾರಿ ಮಾಡಬೇಕು ಎಂದು ಪರಿಶೀಲಿಸಲಾಗುವುದು. ಎಸಿ(ಹವಾನಿಯಂತ್ರಿತ) ಅವಶ್ಯಕತೆ ಇದೆಯೇ ಎಂದು ನೋಡಬೇಕು. ವಸ್ತುಪ್ರದರ್ಶನ, ಮ್ಯೂಸಿಯಂ, ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. ಇದಕ್ಕಾಗಿ ಚೀಫ್ ಆರ್ಕಿಟೆಕ್ಟ್ ಅವರಿಂದ ಪರಿಶೀಲನೆ ನಡೆಸಲು ಕೋರಲಾಗುವುದು. ಸುಮಾರು 2 ಎಕರೆ ಜಾಗದಲ್ಲಿ ಬಹುತೇಕ ಸ್ಥಳವನ್ನು ಕಟ್ಟಡಕ್ಕೆ ಬಳಸಲಾಗಿದೆ. ಕಾರ್ಯಕ್ರಮ ನಡೆಯುವ ವೇಳೆ ಪ್ರತಿಧ್ವನಿ ಆಗದಂತೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂದು ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀ ಕಾಂತರೆಡ್ಡಿ, ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇನ್ನಿತರರಿದ್ದರು.