ಜಿಲ್ಲೆ

ಅಂಬೇಡ್ಕರ್ ನೆನೆಯುವ ಕೆಲಸವಾಗಲಿ

ಚಾಮರಾಜನಗರ: ಭಾರತೀಯರ ಹೆಮ್ಮೆಯ ದಿನವಾದ ಗಣರಾಜ್ಯೋತ್ಸವ ದೇಶದ ಹಬ್ಬವಾಗಿದೆ ಎಂದು ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸಿದರು.

ನಗರದ ನ್ಯಾಯಾಲಯ ರಸ್ತೆಯಲ್ಲಿ ಇರುವ ಶ್ರೀರಾಮಚಂದ್ರ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ದೇಶವನ್ನು ಸರ್ವ ಜನಾಂಗದ ಶಾಂತಿ ತೋಟವೆಂದೆ ಕರೆಯುತ್ತಾರೆ. ಗಣರಾಜ್ಯೋತ್ಸವದಂದು ನಮ್ಮ ದೇಶಕ್ಕೆ ಸಂವಿಧಾನವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆಯುವ ದಿನವಾಗಿದೆ ಎಂದರು.

ಸಂಸ್ಥೆ ಅಧ್ಯಕ್ಷ ಎಂ.ಎಸ್ ಮಾದಯ್ಯ ಮಾತನಾಡಿ, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಕೊಡಬೇಕು. ವಿದ್ಯೆ ಬದುಕುವ ಮಾರ್ಗವನ್ನು ತೋರಿಸುತ್ತದೆ. ಪ್ರತಿಯೊಬ್ಬರಿಗೂ ನಮ್ಮ ದೇಶ, ನಮ್ಮ ನಾಡು ಎಂಬ ಭಾವನೆ ಇರಬೇಕು ಎಂದರು.

ಇದೇ ವೇಳೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಸ್ಥೆ ಸದಸ್ಯ ಎಸ್.ಮಹೇಶ್, ದೈಹಿಕ ಶಿಕ್ಷಕ ಎಸ್.ರಂಗಸ್ವಾಮಿ, ಶಿಕ್ಷಕರಾದ ಕುಮಾರ್, ಯಶ್‌ಪಾಲ್, ಮಂಜುಳಾ, ಪರಶಿವಮೂರ್ತಿ, ವೀರಣ್ಣ ನಾಗರಾಜು ಉಪಸ್ಥಿತರಿದ್ದರು.