ನರಗುಂದ: ಏಕಾಏಕಿ ಭೂಕುಸಿತ ಉಂಟಾಗಿ ಅದರಲ್ಲಿ ಸಿಲುಕಿದ್ದ ಅಂಗನವಾಡಿ ಸಹಾಯಕಿಯೊಬ್ಬಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶುಕ್ರವಾರ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸಂಭವಿಸಿದೆ.
ಅಂಗನವಾಡಿ ಕೇಂದ್ರ ನಂ. 2ರ ಮುಂಭಾಗದಲ್ಲಿರುವ ನಳದಲ್ಲಿ ಸಹಾಯಕಿ ಕಾಶವ್ವ ಬೆಟಗೇರಿ ನೀರು ತರಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಆಗ ತೀವ್ರ ಉಸಿರಾಟದ ಸಮಸ್ಯೆಯುಂಟಾಗಿ ಕಾಶವ್ವಳ ಚೀರಾಟ ಕೇಳಿ ಕಾರ್ಯಕರ್ತೆ ಗೀತಾ ಕಾಕನೂರ ಸ್ಥಳೀಯರ ನೆರವಿಗೆ ಕೋರಿದ್ದಾರೆ. ಕೂಡಲೆ ಬಡಾವಣೆ ನಿವಾಸಿಗಳಾದ ಬಸು ದೊಡ್ಡಮನಿ, ದುಂಡಪ್ಪ ಚಲವಾದಿ ಅಂಗನವಾಡಿ ಸಹಾಯಕಿ ಕಾಶವ್ವ ಅವರನ್ನು ಕಾಪಾಡಿದ್ದಾರೆ. ಆದರೆ, ಅವರ ಕೈ, ಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ನರಗುಂದ ಬಾಬಾಸಾಹೇಬ ಭಾವೆ ತಾಲೂಕಾಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿದು ತಹಸೀಲ್ದಾರ್ ಎ.ಎಚ್. ಮಹೇಂದ್ರ, ಸಿಡಿಪಿಒ ನೀತಾ ವಾಡಕರ್, ಮೇಲ್ವಿಚಾರಕಿಯರಾದ ಶಕುಂತಲಾ ಗಣಿ, ಎಸ್.ಬಿ. ಮುದರಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಸಹಾಯಕಿ ಕಾಶವ್ವಳ ಆರೋಗ್ಯ ವಿಚಾರಿಸಿದ್ದಾರೆ. ಪುರಸಭೆ ಅಧಿಕಾರಿಗಳು ಭೂಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದರು.
ಈ ಹಿಂದೆ ಕಸಬಾ ಬಡಾವಣೆಯ ರತ್ನಾಕರ ದೇಶಪಾಂಡೆ ಎಂಬುವವರು ಭೂಕುಸಿತದಿಂದ ಉಂಟಾದ ಗುಂಡಿಯಲ್ಲಿ ಸಿಲುಕಿ ಸ್ಥಳೀಯರ ಸಹಾಯದಿಂದ ಪಾರಾಗಿದ್ದರು. ಅಲ್ಲದೆ, ಕಳೆದ ಮೂರು ದಿನಗಳ ಹಿಂದಷ್ಟೇ ಸಾಲಿ ಬಸವೇಶ್ವರ ದೇವಸ್ಥಾನದ ಬಳಿಯ ಅಮೃತಗೌಡ ಕರಿಗೌಡ್ರ ಎಂಬುವವರ ಮನೆಯಲ್ಲಿ ಹಾಗೂ ಅರ್ಬಾಣ ಬಡಾವಣೆಯ ಬಸವರಾಜ ಬೋಳಶೆಟ್ಟಿ ಎಂಬುವರ ಮನೆಯ ಮುಂದಿನ ರಸ್ತೆಯಲ್ಲಿ ಭೂಕುಸಿತ ಉಂಟಾಗಿತ್ತು. ಈ ಮೂಲಕ ತಿಂಗಳಲ್ಲಿ ಪಟ್ಟಣದ ಐದಾರು ಕಡೆಗಳಲ್ಲಿ ಭೂಕುಸಿತದ ಘಟನೆಗಳು ಸಂಭವಿಸುತ್ತಿವೆ. ಪದೇಪದೆ ಸಂಭವಿಸುತ್ತಿರುವ ಈ ಭೂಕುಸಿತದ ಘಟನೆಗಳಿಂದ ಪಟ್ಟಣದ ಜನತೆ ಜೀವ ಭಯಕ್ಕೆ ಒಳಗಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಸರ್ಕಾರ ಮತ್ತು ಜಿಲ್ಲಾಡಳಿತದ ನೆರವಿನೊಂದಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
EndFragment