ಬೇಲೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವ ಜ್ಞಾನಿಯಾಗಲು ಭಗವಾನ್ ಬುದ್ಧರ ಆದರ್ಶಗಳೆ ಕಾರಣ ಎಂದು ಬೌದ್ಧ ಸಂಘಟನೆ ಒಕ್ಕೂಟದ ಬೆಂಗಳೂರಿನ ಅಧ್ಯಕ್ಷ ಬಿ.ಗೋಪಾಲ್ ಹೇಳಿದರು.
ತಾಲೂಕಿನ ಬಿಕ್ಕೋಡು ಹೋಬಳಿಯ ಮದಘಟ್ಟ ಗ್ರಾಮದ ಸಮೀಪದ ಅಂಬೇಡ್ಕರ್ ಬೆಟ್ಟದಲ್ಲಿರುವ ಗಾಂಧಾರ ಬುದ್ಧ ವಿಹಾರದಲ್ಲಿ ಕರ್ನಾಟಕ ಬೌದ್ಧ ಧರ್ಮ ಸಮಿತಿಗಳ ಒಕ್ಕೂಟದಿಂದ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಬೌದ್ಧ ಪ್ರತಿನಿಧಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮನುವಾದಿಗಳು ನಾವೇ ಹೆಚ್ಚು ಬುದ್ಧಿವಂತರು ಎಂದು ತಿಳಿದಿದ್ದಾರೆ. ಆದರೆ ನಮ್ಮ ದೇಶದ ಸಂವಿಧಾನ ಬರೆಯುವವರು ಯಾರು ಇರಲಿಲ್ಲ. ಪ್ರಪಂಚಕ್ಕೆ ಮಾದರಿಯಾಗುವ ಸಂವಿಧಾನ ಬರೆದುಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್. ತಂದೆಯ ಮಾರ್ಗದರ್ಶನ ಪಾಲಿಸುತ್ತಿದ್ದ ಅಂಬೇಡ್ಕರ್ ಇಷ್ಟು ದೊಡ್ಡ ವಿಶ್ವ ಜ್ಞಾನಿಯಾಗಲು ಭಗವಾವನ್ ಬುದ್ಧರ ಆದರ್ಶಗಳೇ ಕಾರಣ ಎಂದರು.
ಬೋಧಿದತ್ತ ಭಂತೇಜಿ, ಕರ್ನಾಟಕ ಬೌದ್ಧ ಸಮಿತಿ ಅಧ್ಯಕ್ಷ ಮಹಾದೇವಪ್ಪ, ಕಾರ್ಯದರ್ಶಿ ರಾಚಪ್ಪ, ಗಾಂಧಾರ ಬೌದ್ಧ ವಿಹಾರದ ರಾಜು, ಸಮಿತಿ ಮುಖಂಡರಾದ ಬಸವರಾಜು, ಅನುಪಮಾ, ಗಂಗಾಧರ, ಮಂಜುನಾಥ್, ವಿರೂಪಾಕ್ಷ ಪ್ರವೀಣ್, ಕುಮಾರ್ ಗುಪ್ತ ಇತರರಿದ್ದರು.