ಮೈಸೂರು: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿ ಹಲ್ಲರೆ ಗ್ರಾಮದಲ್ಲಿ ನಡೆದಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು 28 ದಿನಗಳ ಬಳಿಕ ಬಂಧಿಸಲಾಗಿದೆ.
ಹಲ್ಲರೆ ಗ್ರಾಮ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮೂರ್ತಿ ಬಂಧಿತ ಆರೋಪಿ.
ಗ್ರಾಮದಲ್ಲಿ ಮೇ 15ರಂದು ಡಾ.ಅಂಬೇಡ್ಕರ್ ಅವರ ನಾಮಫಲಕಕ್ಕೆ ಮಣ್ಣು ಬಳಿದು ಅಪಮಾನ ಮಾಡಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ತನಿಖಾ ಕಾಲದಲ್ಲಿ ಮೂರ್ತಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಬಳಿಕವೂ ಪೊಲೀಸರ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಈ ಘಟನೆ ಬಗ್ಗೆ ಮಾಹಿತಿ ಇರುವ ಹಾಗೂ ಈತ ಖುದ್ದು ಭಾಗಿಯಾಗಿರುವ ಬಗ್ಗೆ ನಿಖರ ಮಾಹಿತಿ ತನಿಖೆ ವೇಳೆ ಪೊಲೀಸರಿಗೆ ದೊರೆತಿತ್ತು. ಇದರಿಂದಾಗಿ ಈತ ಅಂದಿನಿಂದಲೂ ತಲೆಮರೆಸಿಕೊಂಡಿದ್ದ. ಗ್ರಾಮದಲ್ಲಿ ಈತನ ಈ ವರ್ತನೆಯಿಂದ ಘರ್ಷಣೆ ಉಂಟಾಗುವ ಸಾಧ್ಯತೆ ಇತ್ತು.
ಹೀಗಾಗಿ, ಈತನ ಚಟುವಟಿಕೆಗಳನ್ನು ನಿರ್ಬಂಧಿಸುವ ಹಾಗೂ ಗ್ರಾಮದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಈತನ ವಿರುದ್ಧ ಪಿಎಆರ್ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಬಗ್ಗೆ ನಂಜನಗೂಡು ತಾಲೂಕು ದಂಡಾಧಿಕಾರಿಗಳು ನೋಟಿಸ್ ಹೊರಡಿಸಿದ್ದರೂ ಆದೇಶ ಧಿಕ್ಕರಿಸಿದ್ದ.
ಈ ಮೂಲಕ ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯಕ್ಕೂ ಗೈರಾಗಿದ್ದ. ಪೊಲೀಸ್ ವಿಚಾರಣೆಗೆ ಹಾಗೂ ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಗೈರಾಗಿದ್ದ ಈತನನ್ನು ಗುರುವಾರ ವಶಕ್ಕೆ ಪಡೆದುಕೊಳ್ಳಲಾಗಿದೆ.
ವಿಚಾರಣೆ ನಡೆಸಿ ನಂತರ ತಾಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸಲಾಯಿತು. ಈತನಿಗೆ 2 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಗ್ರಾಮದ ಅಂಬೇಡ್ಕರ್ ಬೀದಿಯ ಮುಖ್ಯ ರಸ್ತೆಯಲ್ಲಿ ಬಾಬಾ ಸಾಹೇಬರ ನಾಮಫಲಕ ಅಳವಡಿಸಲಾಗಿತ್ತು. ಈ ನಾಮಫಲಕವನ್ನು ಹರಿದು, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಣ್ಣು ಬಳಿದಿದ್ದರು. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.