ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾನತೆಯ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ನೂರು ವರ್ಷಗಳ ಹಿಂದೆ ಬಿತ್ತಿದ ಚಿಂತನೆಗಳ ಕುರಿತು ಇಂದಿಗೂ ಮಾತನಾಡುತ್ತಿದ್ದೇವೆ. ಅವರು ಮಹಿಳೆಯರ ಶಿಕ್ಷಣ ಹಾಗೂ ಸಮಾನತೆಗೆ ಒತ್ತು ನೀಡಿದರು. ಅವರಲ್ಲಿ ಅಡಗಿದ್ದ ಅಪಾರವಾದ ಜ್ಞಾನವನ್ನು ಪ್ರಪಂಚದಾದ್ಯಂತ ಜನರು ಅಧ್ಯಯನ ಮಾಡುತ್ತಿದ್ದಾರೆ. ನಾವು ಎಷ್ಟೇ ಅಧ್ಯಯನ ಮಾಡಿದರು, ಅವರ ಸಂಪೂರ್ಣ ಜ್ಞಾನಕ್ಕೆ ಸಮನಾಗಲು ಸಾಧ್ಯವಿಲ್ಲ. ಅವರ ಚಿಂತನೆಗಳ ಕುರಿತಾದ ಅರಿವನ್ನು ಹೆಚ್ಚು ಪರಿಚಯಿಸುವ ಉದ್ದೇಶದಿಂದ, ಈ ಬಾರಿಯ ಜಯಂತಿಯನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ಅಂಬೇಡ್ಕರ್ ಅವರ ಆಶಯದಂತೆ ಇಂದಿನ ತಲೆಮಾರಿನ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಬೇಕಿದೆ. ಈ ಮೂಲಕ ಅವರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ.ಕಲ್ಯಾಣಸಿರಿ ಭಂತೇಜಿ ಸಾನಿಧ್ಯವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ರಾಜು, ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್ ಹಾಗೂ ಇತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ರಾಜಕಾರಣ ಅಗತ್ಯ:
ಪ್ರಸ್ತುತ ಸಾಂಸ್ಕೃತಿಕ ಮತ್ತು ಜ್ಞಾನದ ರಾಜಕಾರಣದಿಂದ ಮಾತ್ರ ಬಿಡುಗಡೆ ಸಾಧ್ಯವಿದ್ದು, ತಳ ಸಮುದಾಯಗಳಿಗೆ ಸಾಂಸ್ಕೃತಿಕ ರಾಜಕಾರಣದ ಬಲ ಅಗತ್ಯವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಹಾಗೂ ಬೌದ್ಧಚಿಂತಕ ಡಾ.ಎಸ್.ನಟರಾಜ್ ಬೂದಾಳು ತಿಳಿಸಿದರು. ವಿಚಾರ ಸಂಕಿರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬೌದ್ಧ ತಾತ್ವಿಕತೆ ವಿಚಾರದ ಕುರಿತು ಮಾತನಾಡಿ, ಅಂಬೇಡ್ಕರ್ ಅವರು ತೋರಿದ ಬೌದ್ಧಧರ್ಮ, ವಿಜ್ಞಾನ ಹಾಗೂ ಪ್ರಜಾಸತ್ತೆಯಿಂದ ಮಾತ್ರ ತಳಸಮುದಾಯಗಳ ಬಿಡುಗಡೆ ಸಾಧ್ಯ. 2-3 ಪುಸ್ತಕಗಳು ಜಗತ್ತಿನ ಜನರನ್ನು ನಿಯಂತ್ರಣ ಮಾಡುತ್ತಿರುವ ಈ ಕಾಲಘಟ್ಟದಲ್ಲಿ, ವೈಜ್ಞಾನಿಕ ಮನೋಭಾವನೆಯ ಧರ್ಮಗ್ರಂಥಗಳು ಅಗತ್ಯವಾಗಿದೆ. ದೇಶದ ಶೂದ್ರ ಭಾರತ ಇಂದಿಗೂ ಅಂಬೇಡ್ಕರ್ ಚಿಂತನೆಗಳನ್ನು ನಮ್ಮದು ಎಂದು ಅಪ್ಪಿಕೊಂಡಿಲ್ಲ. ಆಗಾಗಿ ಪ್ರತಿಯೊಬ್ಬರು ವೈದಿಕ ಸಂವಿಧಾನದ ಅಡಿಯಾಳಾಗಿದ್ದೇವೆ. ಇದಕ್ಕೆ ಅಂಬೇಡ್ಕರ್ ಸಂವಿಧಾನ ಮತ್ತು ಬೌದ್ಧ ತಾತ್ವಿಕತೆಯಿಂದ ಮಾತ್ರ ಪರಿಹಾರ ದೊರೆಯುತ್ತದೆ ಎಂದರು.
ಸಂವಿಧಾನ ನಡೆ-ನುಡಿಯಾಗಲಿ:
ಪ್ರಸ್ತುತ ಆಚರಣೆಗಳು ವಿಜೃಂಭಿಸಿ, ಅರಿವು ಕಡಿಮೆಯಾಗುತ್ತಿರುವ ಕಾಲಮಾನದಲ್ಲಿ ಪ್ರತಿಯೊಬ್ಬರ ನಡೆ-ನುಡಿ ಸಂವಿಧಾನವಾಗಬೇಕಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರ ಕುಮಾರ್ ಸಲಹೆ ನೀಡಿದರು. ಅಂಬೇಡ್ಕರ್ ಅವರು ಕೋಟಿ ಕೋಟಿ ಜನರ ಸಂಕಟಗಳಿಗೆ ಪರಿಹಾರವನ್ನು ನೀಡಿದರು. ಮಹಾಡ್ ಕರೆ ನೀರಿಗಾಗಿ ನಡೆದ ಹೋರಾಟದಿಂದ ರೂಪುಗೊಂಡ ಅಂಬೇಡ್ಕರ್, ಕೋಟ್ಯಾಂತರ ಜನರ ಜೀವನಕ್ಕೆ ಸಂವಿಧಾನದ ಮೂಲಕ ಭದ್ರಬುನಾದಿಯನ್ನು ಹಾಕಿದರು. ಪ್ರಸ್ತುತ ತಳಸಮುದಾಯಗಳ ಪರವಾಗಿ ಕಾನೂನುಗಳು ಇದ್ದರೂ ಅದು ಪಾಲನೆಯಾಗುತ್ತಿಲ್ಲ. ಅಸಮಾನತೆ ಇಂದಿಗೂ ಮುಂದುವರಿಯುತ್ತಲೇ ಇದೆ. ಈ ಕಾರಣಕ್ಕೆ ಸಂವಿಧಾನವನ್ನು ಪ್ರತಿಯೊಬ್ಬರು ಅಪ್ಪಿಕೊಳ್ಳುವುದು ಹಿಂದಿಗಿಂತಲೂ ಇಂದು ತುರ್ತಾಗಿದೆ ಎಂದು ಹೇಳಿದರು.
ಗೌರಮ್ಮನಿಗೆ ಸನ್ಮಾನ:
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ 2025ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಗೌರಮ್ಮ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಗೌರಮ್ಮ ಮಾತನಾಡಿ, ಈ ಬಡ ಅಂಧ ಕಲಾವಿದೆಯನ್ನು ಸಿ.ಎಂ.ನರಸಿಂಹಮೂರ್ತಿ ಅವರು ಗುರುತಿಸಿ ಪ್ರೋತ್ಸಾಹಿಸಿದರು. ನನಗೆ ಇಂದಿಗೂ ಸ್ವಂತ ಮನೆ ಇಲ್ಲ ಎಂದು ಅಳಲು ತೋಡಿಕೊಂಡರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ,ಶೀಘ್ರದಲ್ಲೇ ನಿಮಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮನೆಯನ್ನು ನಿರ್ಮಿಸಲು ಕ್ರಮವಹಿಸಲಾಗವುದು ಎಂದು ಭರವಸೆ ನೀಡಿದರು.