ಮೈಸೂರು: ರಾಜ್ಯ ಸರ್ಕಾರ ಜೀವಂತವಾಗಿದ್ದರೆ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಅವಹೇಳನ ಮಾಡಿರುವ ಬೆಂಗಳೂರು ಜೈನ ವಿಶ್ವವಿದ್ಯಾಲಯದ ಮಾನ್ಯತೆ ರದ್ದುಪಡಿಸಿ, ಆಡಳಿತ ಮಂಡಳಿ ಸದಸ್ಯರನ್ನು ಜೈಲಿಗೆ ಕಳುಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.
ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿರುನಾಟಕದಲ್ಲಿ ಅಂಬೇಡ್ಕರ್ ಅವರನ್ನು ಗೇಲಿ ಮಾಡಲಾಗಿದೆ. ಶ್ರೋತೃಗಳಾಗಿದ್ದ ಪ್ರಾಧ್ಯಾಪಕರು ಚಪ್ಪಾಳೆ ತಟ್ಟಿದ್ದಾರೆ. ಮುಟ್ಟಿಸಿಕೊಳ್ಳಬೇಡ ಎಂದು ಹೇಳುವ ಮೂಲಕ ನೇರವಾಗಿ ಅಸ್ಪಶ್ಯತೆ ಆಚರಣೆ ಮಾಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ನಾಟಕ ಪ್ರದರ್ಶನಕ್ಕೂ ಮುಂಚೆ 4 ಬಾರಿ ತಾಲೀಮು ಮಾಡಿದ್ದಾರೆ. ಎಲ್ಲ ಗೊತ್ತಿದ್ದೂ ಸಂವಿಧಾನ ಶಿಲ್ಪಿಗೆ ಅವಹೇಳನ ಮಾಡಲಾಗಿದೆ. ಖಾಸಗಿ ವಿವಿಯಲ್ಲಿ ಯಾರ ಲಂಗು ಲಗಾಮಿಲ್ಲ. ಸಿ.ಟಿ.ರವಿ ಉನ್ನತ ಶಿಕ್ಷಣ ಸಚಿವರಾಗಿದ್ದ ಕಾಲದಲ್ಲಿ ಜೈನ ವಿವಿ ಆರಂಭವಾಗಿದೆ. ಘಟನೆ ನಡೆದ ವಾರದ ಬಳಿಕ ಉನ್ನತ ಶಿಕ್ಷಣ ಸಚಿವರು ಪ್ರತಿಕ್ರಿಯಿಸಿದ್ದಾರೆ. ಶಿಕ್ಷಣವನ್ನು ಯಾವ ರೀತಿ ಹಾಳು ಮಾಡಿದ್ದೇವೆ ಎಂಬುದಕ್ಕೆ ಇವೆಲ್ಲ ನಿದರ್ಶನಗಳು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂವಿಧಾನ ರಕ್ಷಕರಾದ ರಾಜ್ಯಪಾಲರು ಕೈಕಟ್ಟಿ ಕುಳಿತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಏನು ಮಾಡುತ್ತಿದೆ? ಸಿಆರ್‌ಇ ಸೆಲ್ ಕೆಲಸ ಏನು? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಸ್ವಯಂ ಪ್ರಕರಣ ದಾಖಲಿಸಬೇಕಿತ್ತು. ಪ್ರತಿಪಕ್ಷಗಳ ನಾಯಕರು, ಪ್ರಜಾಪ್ರಭುತ್ವವಾದಿಗಳು, ಅಂಬೇಡ್ಕರ್‌ವಾದಿಗಳು, ಪ್ರಗತಿಪರರು ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಇಡೀ ವ್ಯವಸ್ಥೆ ಯಾರ ಅಧೀನದಲ್ಲಿದೆ? ದೊಡ್ಡ ದೇಶಭಕ್ತ ಚಕ್ರವರ್ತಿ ಸೂಲಿಬೆಲೆ, ಶತವಧಾನಿ, ಪಠ್ಯಪುಸ್ತಕ ಕುಲಗೇಡಿಸಿದ ರೋಹಿತ್ ಚಕ್ರತೀರ್ಥ, ಮುತಾಲಿಕ್‌ರಂಥವರು ರಾಜ್ಯ ಸರ್ಕಾರವನ್ನು ಕಂಟ್ರೋಲ್ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಕ್ಷಮೆಯನ್ನೂ ಕೇಳದ ವಿವಿ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ಜನರು ಏಕೆ ಸುಮ್ಮನಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ವಿಶ್ವದಲ್ಲಿ ಭಾರತ ಮತ್ತು ಭಾರತೀಯರಿಗೆ ಅಂಬೇಡ್ಕರ್ ಬರೆದ ಗಣತಂತ್ರವಾದಿ ಸಂವಿಧಾನದಿಂದ ಗೌರವ ಬಂದಿದೆ. ಭಾರತೀಯರಿಗೆ ಮಹಾಭಾರತ, ರಾಮಾಯಣ, ಕುರಾನ್, ಬೈಬಲ್‌ಗಿಂತ ಮಿಗಿಲಾದದ್ದು ಭಾರತದ ಸಂವಿಧಾನ. ಸಂವಿಧಾನ ಬರೆದವರ ಬಗ್ಗೆಯೇ ಗೇಲಿ, ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಯೋಚನೆ ತೆಗೆದುಕೊಳ್ಳಬೇಕು ಎಂದರು.
ಮೈಸೂರು ಭಾಗದಲ್ಲಿಯೇ ನಾಲ್ಕು ವಿಶ್ವವಿದ್ಯಾಲಯ ಮಾಡಲಾಗಿದೆ, ಇದು ಏಕೆ? ಖಾಸಗಿಯಾಗಿ ಎಷ್ಟು ವಿವಿಗಳು ಸ್ಥಾಪನೆಯಾಗಿವೆ? ಇವೆಲ್ಲ ಬಡವರ ಮಕ್ಕಳ ಉನ್ನತ ಶಿಕ್ಷಣದ ಕನಸು ಹಾಳು ಮಾಡುವ ಕ್ರಮಗಳಾಗಿವೆ. ರಾಜ್ಯ ಸರ್ಕಾರ ಎನ್‌ಇಪಿ ಜಾರಿ ಮಾಡಿರುವ ಮೊದಲ ರಾಜ್ಯವೆಂದು ಹೆಮ್ಮೆಪಡುತ್ತದೆ. ಆದರೆ, ಇತ್ತೀಚಿಗೆ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರದ ಅನುದಾನವನ್ನು ಕಡಿತ ಮಾಡಲಾಗಿದೆ. ಯಾವ ರೀತಿ ಎನ್‌ಇಪಿ ಪಠ್ಯಕ್ರಮದಡಿ ಶಿಕ್ಷಣ ನೀಡುತ್ತೀರಿ ಎಂದು ಪ್ರಶ್ನಿಸಿದರು.
ದಕ್ಷಿಣ ಕನ್ನಡದಲ್ಲಿ ಭಾರತ ಮಾತೆ ದೇವಾಲಯ ನಿರ್ಮಾಣ ಸಂಬಂಧ ಪ್ರತಿಕ್ರಿಯಿಸಿದ ವಿಶ್ವನಾಥ್, ಸಾವಿರಾರು ವರ್ಷಗಳಿಂದ ಭಾರತ ಮಾತೆ ನಮ್ಮ ಹೃದಯದಲ್ಲಿ ನೆಲೆಸಿದ್ದಾಳೆ. ಹೊಸದಾಗಿ ಪ್ರೀತಿಸುವುದನ್ನು ಹೇಳುತ್ತಿದ್ದಾರೆ. ಇದರಿಂದ ನಮ್ಮ ದೇವರು ಹೆದರಿ ಓಡಿ ಹೋಗುವ ಪರಿಸ್ಥಿತಿ ಇದೆ. ಭಾರತೀಯರ ಕಣಕಣದಲ್ಲೂ ರಾಷ್ಟ್ರೀಯತೆ ಇದೆ. ಯಾರೂ ರಾಷ್ಟ್ರೀಯತೆ ಪಾಠ ಹೇಳುವ ಅಗತ್ಯ ಇಲ್ಲ ಎಂದರು.