ಕುಶಾಲನಗರ: ನೊಂದವರು ಹಾಗೂ ದಮನಿತರ ಧ್ವನಿಯಾದ ಡಾ.ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯದ ಸ್ವತ್ತಲ್ಲ. ಇಡೀ ಮನುಕುಲದ ಸಮ ಸಮಾಜದ ಆಸ್ತಿ ಎಂದು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಅಭಿಪ್ರಾಯಪಟ್ಟರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕೊಡಗು ಜಿಲ್ಲಾ ಸರ್ಕಾರಿ ನೌಕರರ ಸಮನ್ವಯ ಸಮಿತಿ ಹಾಗೂ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಸಾಪ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಅವರು ಗುಡಿ ಗೋಪುರಗಳಲ್ಲಿ ಕ್ಯೂ ನಿಲ್ಲುವ ಮಂದಿ ಗ್ರಂಥಾಲಯಗಳಲ್ಲಿ ಸಾಲು ಸಾಲಾಗಿ ನಿಂತು ಪುಸ್ತಕಗಳನ್ನು ಓದುವ ಮೂಲಕ ಮಸ್ತಕವನ್ನು ತುಂಬಿಸಿಕೊಂಡಾಗ ಈ ದೇಶ ಅಭಿವೃದ್ಧಿಯಾಗುತ್ತದೆ ಎಂದು ವಾದಿಸಿದ ಮಹಾತ್ಮ ಅಂಬೇಡ್ಕರ್ ಎಂದು ಸ್ಮರಿಸಿದರು.
ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಮಹೇಂದ್ರಕುಮಾರ್ ಮಾತನಾಡಿ, ಆಧುನಿಕ ಭಾರತದ ನಿರ್ಮಾಪಕರಾದ ಡಾ.ಅಂಬೇಡ್ಕರ್ ಜಾತಿ ಪದ್ಧತಿ, ಅಸ್ಪಶ್ಯತೆ, ಬಡತನ ಮುಂತಾದ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳ ನಿವಾರಣೆ ಪರಿಹಾರ ರೂಪಿಸಿದ ಮಹಾಚೇತನ ಎಂದು ಬಣ್ಣಿಸಿದರು.
ಅರಕಲಗೂಡು ತಾಲೂಕು ಬಿದರೂರು ಸರ್ಕಾರಿ ಶಾಲೆಯ ಶಿಕ್ಷಕ ಜಿ.ಸುನಿಲ್ ಕುಮಾರ್ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಬದುಕು - ಬರಹಗಳ ಕುರಿತು ಉಪನ್ಯಾಸ ನೀಡಿದರು.
ಇದೇ ವೇಳೆ ಹತ್ತನೆ ತರಗತಿ ನಂತರ ಮುಂದೇನು? ಎಂಬ ವಿಷಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ನೌಕರರ ಸಮನ್ವಯ ಸಮಿತಿ ವತಿಯಿಂದ ಹೊರತಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ನಿವೃತ್ತ ಪ್ರಾಂಶುಪಾಲ ಬೆಳ್ಳಿಯಪ್ಪ, ಆಲೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಮುಖಂಡರಾದ ಮಂಜುನಾಥ್, ಸತೀಶ್, ಲೋಕೇಶ್, ನಟರಾಜು, ಪತ್ರಕರ್ತ ಮಧು ಇದ್ದರು.