ಜಿಲ್ಲೆ

ಅಂಬೇಡ್ಕರ್ ಐಡಿಯಾಲಜಿ ಯಾರಲ್ಲೂ ಕಾಣಲಾಗದು

ಚಿತ್ರದುರ್ಗ: ವೇದ, ಉಪನಿಷತ್ತು, ಗಾಂಧೀಜಿ ಅವರ ತತ್ವಗಳಲ್ಲೂ ಕಾಣಲಾಗದ ಐಡಿಯಾಲಜಿ ಅಂಬೇಡ್ಕರ್ ಅವರ ವಿಚಾರಗಳಲ್ಲಿ ಕಾಣಬಹುದು ಎಂದು ಡಾ.ಅರುಣ್ ಜೋಳದಕೂಡ್ಲಿಗಿ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಡೀ ದೇಶವನ್ನು ಅರ್ಥೈಸಿಕೊಳ್ಳಲು ಅಂಬೇಡ್ಕರ್ ಓದು ಅಗತ್ಯವಿದೆ. ಕಳೆದೊಂದು ದಶಕದಿಂದ ಅವರ ಕುರಿತು ಓದುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದರು.

ಭಾರತದೊಳಗಿನ ವ್ಯವಸ್ಥೆಯನ್ನು ತರ್ಕ, ಪ್ರಯೋಗಗಳಿಗೆ ಒಳಪಡಿಸಿದ ನಂತರವೇ ಸರಿ-ತಪ್ಪಿನ ವಿಮರ್ಶೆಗಾಗಿ ಅರ್ಜಿಯನ್ನು ಜನರ ಮುಂದಿಟ್ಟವರು ಅಂಬೇಡ್ಕರ್. ಶಿಕ್ಷಣದ ಮಹತ್ವ ಸಾರುವ ಮೂಲಕ ಜ್ಞಾನದ ದೀವಿಗೆಯೊಂದಿಗೆ ಸಂಕೇತವಾದರು. ಸಂಘಟನೆ, ಹೋರಾಟಕ್ಕೆ ಆದ್ಯತೆ ನೀಡಿ ಮಲಗಿದ್ದ ಜನರನ್ನು ಬಡಿದ್ದೆಬ್ಬಿಸಿದ ಮಹನೀಯರಾದರು ಎಂದು ಬಣ್ಣಿಸಿದರು.

ಮುಂದಿನ ನೂರು ವರ್ಷ ಕಳೆದರೂ ಅಂಬೇಡ್ಕರ್ ಚಿಂತನೆ ಪ್ರಸ್ತುತ. ಇಡೀ ಭಾರತ ಪ್ರಬುದ್ಧವಾಗಲು ಬೌದ್ಧ ಧರ್ಮದಿಂದ ಸಾಧ್ಯ. ಮೂಕ ನಾಯಕ ಪತ್ರಿಕೆ ಮೂಲಕ ಶೋಷಿತರ ದನಿಯಾಗಿಯೂ ಕೆಲಸ ಮಾಡಿದ್ದಾರೆ. ಹೀಗಾಗಿ ಈ ವರ್ಗದವರ ಐಕಾನ್ ಆಗಿಯೂ ಹೊರಹೊಮ್ಮಿದ್ದಾರೆ ಎಂದು ಸ್ಮರಿಸಿದರು.

ವಾರ್ತಾಧಿಕಾರಿ ಆರ್.ಮಾರುತಿ ಮಾತನಾಡಿ, ಅಂಬೇಡ್ಕರ್ ಸಾಮಾಜಿಕ ನ್ಯಾಯಕ್ಕೆ ದನಿ ಎತ್ತದಿದ್ದರೆ, ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಸಮುದಾಯಗಳು ಸಮಸ್ಯೆ ಎದುರಿಸಬೇಕಾಗಿತ್ತು. ದೇಶ-ವಿದೇಶ ಸುತ್ತಾಡಿ ಎಲ್ಲ ವರ್ಗದ ಜನರ ಜೀವನ ವ್ಯವಸ್ಥೆ ಅರ್ಥೈಸಿಕೊಂಡು ಬದುಕಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸಂವಿಧಾನ ರಚಿಸಿದ್ದಾರೆ. ಹೀಗಾಗಿ ಬೇಧ-ಭಾವವಿಲ್ಲದೆ, ನಾವೆಲ್ಲರೂ ಒಂದಾಗಿ ಜೀವಿಸಲು ಸಾಧ್ಯವಾಗಿದೆ ಎಂದರು.

ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಉಪಾಧ್ಯಕ್ಷ ನಾಕೀಕೆರೆ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿದ್ಧರಾಜು, ಪತ್ರಕರ್ತರಾದ ಶ.ಮಂಜುನಾಥ್, ವಿನಯ್ ತೊಡರನಾಳ್, ರವಿ ಮಲ್ಲಾಪುರ ಇತರರಿದ್ದರು.