ಹಾಸನ: ಪೂಜಿಸುವ ದೇವರನ್ನು ಇದುವರೆಗೂ ಯಾರೂ ಸಹ ಈ ಭೂಮಿ ಮೇಲೆ ನೋಡಿಲ್ಲ. ಕಣ್ಣಿಗೆ ಕಾಣುವ ದೇವರು ಇದ್ದಾರೆ ಎಂದರೆ ಅದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮಾತ್ರ ಎಂದು ಶಾಂತಿಗ್ರಾಮ ಪೊಲೀಸ್ ಠಾಣೆ ಪಿಎಸ್‌ಐ ಅರುಣ್ ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಶಾಂತಿಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಬಳಗದ ವತಿಯಿಂದ ಮಂಗಳವಾರ ಸಂಜೆ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸಮಾಜ ಆರ್ಥಿಕವಾಗಿ ಸದೃಢವಾಗಲು ಶಿಕ್ಷಣ ಅತಿ ಮುಖ್ಯ. ಯುವ ಸಮೂಹ ಹಾಗೂ ಹೊಸ ಪೀಳಿಗೆಗೆ ಡಾ. ಅಂಬೇಡ್ಕರ್ ಅವರ ಆಶಯಗಳನ್ನು ಪರಿಚಯಿಸಬೇಕಿದೆ ಎಂದು ಹೇಳಿದರು.
ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಜಗಣ್ಣ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಪ್ರಮುಖ ಶಿಲ್ಪಿಯಾಗಿದ್ದಾರೆ. ಅವರು ಕಾನೂನು ತಜ್ಞರಾಗಿ, ಬರವಣಿಗೆಗಾರರಾಗಿ, ಸ್ಕಾಲರ್ ಆಗಿ, ಸಂಪಾದಕರಾಗಿ, ತತ್ವಜ್ಞಾನಿಯಾಗಿ ಅನೇಕ ವಿಷಯಗಳಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದರು. ಅವರ ತತ್ವಗಳನ್ನು ನಾವು ಅನುಸರಿಸಿ ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಪ್ರಶಾಂತ್, ಸದಸ್ಯ ವಿನಯ್, ಶಿಕ್ಷಕ ಯೋಗೇಶ್, ಗಂಗಣ್ಣ, ಗ್ರಾಮ ಒನ್ ಪ್ರದೀಪ್ ಹೊಂಗೆರೆ, ಕುಮಾರ್, ಸಮಾಜ ಸೇವಕ ಪ್ರವೀಣ್ ಗೌಡ, ಚಂದನ್ ಗೌಡ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ, ಚೇತನ್ ಕುಮಾರ್ ಕಾರ್ಯಕ್ರಮದ ಆಯೋಜಕರಾದ ಮಧು, ರಾಕೇಶ್, ಚಂದನ್ ಹಾಗೂ ಗ್ರಾಮಸ್ಥರು ಹಾಜರಿದ್ದರು.