ಅರಕಲಗೂಡು: ಸಾಮಾಜಿಕ ನ್ಯಾಯಾಕ್ಕಾಗಿ ಶ್ರಮಿಸಿ ಸಮಾಜದಲ್ಲಿ ಸಮಾನತೆ ಸ್ಥಾಪಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಪೂಜಿಸುವುದಕ್ಕಿಂತ ಅವರ ಆದರ್ಶಗಳು, ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಶಾಸಕ ಎ. ಮಂಜು ಹೇಳಿದರು.
ತಾಲೂಕಿನ ರಾಮನಾಥಪುರ ಹೋಬಳಿ ರಾಗಿಮರೂರು ಗ್ರಾಮದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿಯೇ ಮೊದಲು ಬಾರಿಗೆ ತಾಲೂಕು ಕಚೇರಿ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಿದ್ದು ಇತಿಹಾಸವಾಗಲಿದೆ. ನಾವೆಲ್ಲರೂ ಮಾನವರು, ಎಲ್ಲರನ್ನು ಸಮಾನತೆಯಿಂದ ಕಾಣಬೇಕು. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನಕ್ಕೆ ಗೌರವ ಸಿಗಬೇಕಾದರೆ ಎಲ್ಲರೂ ವಿದ್ಯಾವಂತರಾಗಬೇಕು. ಅಂಬೇಡ್ಕರ್ ಪುತ್ಥಳಿಯನ್ನು ಶಾಲೆಯ ಮುಂದೆ ನಿರ್ಮಿಸಿರುವುದರಿಂದ ಶಾಲೆಗೆ ಬರುವ ಮಕ್ಕಳು ಪ್ರತಿದಿನ ಪುತ್ಥಳಿ ನೋಡಿ ನಾವು ಅವರಂತೆ ಆಗಬೇಕು ಎಂಬುದಾಗಿ ಅವರಿಗೆ ಅರಿವಾಗುತ್ತದೆ ಎಂದರು.
ಪುತ್ಥಳಿ ಕೊಡುಗೆ ನೀಡಿದ ಪ್ರಶಾಂತ್ ವೆಂಕಟೇಗೌಡ ಮಾತನಾಡಿದರು. ಡಾ.ವಿಷ್ಣು ಸೇನಾ ಬಳಗದ ಮುಖಂಡದ ವಿಷ್ಣು ಪ್ರಕಾಶ್, ವಕೀಲ ಮಹೇಶ್, ಪ್ರಕಾಶ್, ತಾಲೂಕು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಅಧ್ಯಕ್ಷ ದುಮ್ಮಿ ಕೃಷ್ಣ, ಶಿರಸ್ತೇದಾರ್ ಸಿ.ಸ್ವಾಮಿ, ಗ್ರಾಮಸ್ಥರು ಇದ್ದರು.