ಬೀದರ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸುತ್ತಿರುವ ಅಂಬೇಡ್ಕರ್ ಓದು ಕಾರ್ಯಕ್ರಮ ಕೇವಲ ಅಂಬೇಡ್ಕರ್ ಓದು ಅಲ್ಲ. ಅದು ಪ್ರಜಾಪ್ರಭುತ್ವದ ಓದು ಕಾರ್ಯಕ್ರಮ. ಅಂಬೇಡ್ಕರ್ ಅವರು ಅಪ್ರತಿಮ ಚಿಂತಕ, ದಾರ್ಶನಿಕ ಎಂದು ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ ಡಾ.ಬಿ.ಆರ್ ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರತರಾಗಿ ಓದುವುದನ್ನು ಮರೆತಿದ್ದಾರೆ. ಅಂಬೇಡ್ಕರ್ ಅವರು ಯಾವುದೇ ಸೌಲಭ್ಯಗಳಿಲ್ಲದಿದ್ದರೂ ಸತತವಾಗಿ ಅಧ್ಯಯನ ಮಾಡಿ ಸಂವಿಧಾನ ಶಿಲ್ಪಿ ಎನಿಸಿಕೊಂಡರು. ಆದರೆ ಇಂದು ಮಕ್ಕಳಿಗೆ ಎಲ್ಲ ಸೌಲಭ್ಯ ಒದಗಿಸಿಕೊಟ್ಟರೂ ಪುಸ್ತಕ ಓದುವ ಹವ್ಯಾಸ ಇಲ್ಲ. ಕೇವಲ ಮೊಬೈಲ್ನಲ್ಲಿ ಕಾಲಹರಣ ಮಾಡಿ ತಮ್ಮ ಅಮೂಲ್ಯವಾದ ವ್ಯಕ್ತಿತ್ವ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಜಿಪಂ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ್ ಗಾದಗಿ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರು ಇಡೀ ವಿಶ್ವ ಕಂಡ ಶ್ರೇಷ್ಠ ಜ್ಞಾನಿ. ಅವರು ನಮ್ಮ ದೇಶದಲ್ಲಿ ಜನಿಸಿರುವುದು ಭಾರತೀಯರ ಪುಣ್ಯ ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಮಕ್ಕಳು ಅವಿರತ ಶ್ರಮದಿಂದ ಅಧ್ಯಯನ ಮಾಡಬೇಕು. ಸರ್ಕಾರದ ಸೌಲಭ್ಯ ಸದುಪಯೋಗ ಮಾಡಿಕೊಂಡು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಅಭ್ಯುದಯಕ್ಕಾಗಿ ಶ್ರಮಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಶಿವಶಂಕರ ಟೋಕರೆ ಮಾತನಾಡಿ, ಕಷ್ಟದ ಸಂದರ್ಭದಲ್ಲಿಯೂ ಅಂಬೇಡ್ಕರ್ ಅವರು ವ್ಯಾಸಂಗ ಮಾಡಿ ದೇಶಕ್ಕೆ ಮಾದರಿಯಾದರು. ಪ್ರಸ್ತುತ ಶೈಕ್ಷಣಿಕ ವಲಯದಲ್ಲಿ ಸಕಲ ಸೌಲಭ್ಯ ಒದಗಿಸಿದರು ವಿದ್ಯಾರ್ಥಿಗಳು ಸೋಮಾರಿಗಳಾಗುತ್ತಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿಲೀಪ ಕಾಡವಾದ ಮತ್ತು ಸಂಗಡಿಗರು ಸಾಂಸ್ಕೃತಿಕ ಕಾರ್ಯಕ್ರಮ, ಯೋಗೇಶ ಮತ್ತು ತಂಡ ಜಾನಪದ ಗೀತೆ ನಡೆಸಿಕೊಟ್ಟರು. ಈ ವೇಳೆ ಅಂಬೇಡ್ಕರ್ ಅವರ ಬದುಕು ಮತ್ತು ಬರಹ ಕುರಿತು ಪ್ರಬಂಧ ಸ್ಪರ್ಧೆ ವಿಜೇತರಾದ ಲೋಕೇಶ ರತಿಕಾಂತ (ಪ್ರಥಮ), ಸಂಜುಕುಮಾರ (ದ್ವೀತೀಯ), ಗಣಪತಿ ಗೊಂಡ (ತೃತೀಯ) ಹಾಗೂ ಪ್ರವೀಣ ಚಂದ್ರಕಾಂತ (ಸಮಾಧನಕರ ಬಹುಮಾನ) ಅವರಿಗೆ ಬಹುಮಾನ ವಿತರಿಸಲಾಯಿತು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ವಿಜಯಕುಮಾರ ಗೌರೆ, ಪ್ರಕಾಶ ಜನವಾಡಕರ್, ಬಾಬು ಪ್ರಭಾಜಿ, ರಮೇಶ ಪೂಜೇರಿ ಇತರರಿದ್ದರು.